ಬೆಂಗಳೂರು, ಸೆ. 29 : (ಸಮದರ್ಶಿ ಸುದ್ದಿ) - ಬಿಸಿಲಿನ ತೀವ್ರತೆಯಿಂದ ಬಳಲುತ್ತಿದ್ದ ರಾಜ್ಯದಲ್ಲಿ ಮತ್ತೆ ಮಳೆಯ ವಾತಾವರಣ ಸೃಷ್ಟಿಯಾಗಿದ್ದು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಗುಡುಗು-ಮಿಂಚು ಹಾಗೂ ಬಿರುಗಾಳಿ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸೆ. 30ರಂದು ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ.
ಹವಾಮಾನ ಇಲಾಖೆಯ ಸೆ. 29ರ ಅಧಿಕೃತ ಮುನ್ಸೂಚನೆಯ ಪ್ರಕಾರ, ದಕ್ಷಿಣ ಒಳನಾಡಿನಲ್ಲಿ ಸೆ. 29ರಿಂದ ಅ. 1ರವರೆಗೆ ಭಾರಿ ಮಳೆ ಹಾಗೂ ಗುಡುಗು-ಮಿಂಚಿನ ಎಚ್ಚರಿಕೆ ಇದೆ. ಅ. 2ರಂದು ಕೂಡ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಸೆ. 29 ಮತ್ತು 30ರಂದು ಗುಡುಗು-ಮಿಂಚು ಹಾಗೂ ಬಿರುಗಾಳಿಯ ಸಾಧ್ಯತೆ ಇದೆ. ಆದರೆ ಕರಾವಳಿ ಕರ್ನಾಟಕಕ್ಕೆ ಈ ಅವಧಿಯಲ್ಲಿ ಯಾವುದೇ ವಿಶೇಷ ಎಚ್ಚರಿಕೆ ನೀಡಲಾಗಿಲ್ಲ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಧ್ಯಾಹ್ನ ಅಥವಾ ಸಂಜೆಯ ವೇಳೆ ಮೋಡ ಕವಿದ ವಾತಾವರಣದೊಂದಿಗೆ ಗುಡುಗು-ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಮಂಗಳವಾರ ಸಂಜೆ ತಾಪಮಾನ ಸುಮಾರು 24.8 ಡಿಗ್ರಿ ಸೆಲ್ಸಿಯಸ್ ಹಾಗೂ ತೇವಾಂಶ ಶೇ 73ರಷ್ಟಿತ್ತು ಎಂದು ಹವಾಮಾನ ಇಲಾಖೆಯ ನಗರ ಹವಾಮಾನ ಸೇವೆ ದಾಖಲಿಸಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಭಾಗಗಳಲ್ಲಿಯೂ ಚದುರಿದ ಮಳೆ ನಿರೀಕ್ಷಿಸಲಾಗಿದೆ.
ಮುಂದಿನ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಗುಡುಗು-ಮಿಂಚಿನ ಸಂದರ್ಭದಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳ ಕೆಳಗೆ ನಿಲ್ಲದಂತೆ ಮತ್ತು ಬಿರುಗಾಳಿಯ ವೇಳೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.