LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಹಾಲಿನ ದರ ₹10 ಏರಿಕೆಗೆ ಒತ್ತಾಯ: ಇಂದು ಸಿಎಂಗೆ ಪ್ರಸ್ತಾವ

ಬೆಂಗಳೂರು, ಸೆ. 25 : (ಸಮದರ್ಶಿ ಸುದ್ದಿ) - ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ ₹10 ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ಒತ್ತಾಯಿಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೆ.26ರಂದು ಅಧಿಕೃತ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ ತಿಳಿಸಿದ್ದಾರೆ.

ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಾಲಿನ ದರ ಪರಿಷ್ಕರಣೆ ಕುರಿತು ವಿಸ್ತೃತ ಚರ್ಚೆ ನಡೆಯಿತು. ರಾಜ್ಯದ 14 ಹಾಲು ಒಕ್ಕೂಟಗಳು ಈಗಾಗಲೇ ದರ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸಿದ್ದು, ರೈತರ ಹಿತದೃಷ್ಟಿಯಿಂದ ಕನಿಷ್ಠ ₹10 ಹೆಚ್ಚಿಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಸುರೇಶ ಹೇಳಿದರು.

“ರೈತರು ಹಾಲಿನ ದರವನ್ನು ಕನಿಷ್ಠ ₹10 ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಹಾಲು ಉತ್ಪಾದನಾ ವೆಚ್ಚ, ಒಕ್ಕೂಟಗಳ ಆಡಳಿತ ವೆಚ್ಚ ಹಾಗೂ ಇತರ ಸಮಸ್ಯೆಗಳನ್ನು ಒಳಗೊಂಡ ಪ್ರಸ್ತಾವವನ್ನು ಶನಿವಾರ ಬೆಳಿಗ್ಗೆ 10 ಗಂಟೆಗೆ ಮುಖ್ಯಮಂತ್ರಿಗೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಕಳೆದ ಆರೇಳು ತಿಂಗಳಲ್ಲಿ ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚಿವೆ. ರೈತರು ಹೆಚ್ಚಿನ ಪ್ರೋತ್ಸಾಹಧನಕ್ಕೆ ಬೇಡಿಕೆ ಇಟ್ಟಿದ್ದು, ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿಯೂ ಹಾಲಿನ ದರ ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಇತರ ರಾಜ್ಯಗಳಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ ದರ ಹಾಗೂ ಕರ್ನಾಟಕದಲ್ಲಿ ನೀಡುತ್ತಿರುವ ದರವನ್ನು ಹೋಲಿಸಿ ಸರ್ಕಾರದ ಮುಂದೆ ವಿವರಗಳನ್ನು ಮಂಡಿಸಲಾಗುವುದು ಎಂದರು.

ಕೆಎಂಎಫ್‌ನ ಕಳೆದ ವರ್ಷದ ಆದಾಯ-ವೆಚ್ಚ ಹಾಗೂ ನಂದಿನಿ ಬ್ರ್ಯಾಂಡ್ ಅನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಎಂಎಫ್ ಲಾಭವೂ ಕಡಿಮೆಯಾಗಿದೆ ಎಂದು ಸುರೇಶ್ ಹೇಳಿದರು.

ಹಾಲಿನ ದರ ಪರಿಷ್ಕರಣೆಯಾದರೆ ನಂದಿನಿ ಹಾಲಿನ ಉತ್ಪನ್ನಗಳ ದರವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಆದರೆ ದರ ಹೆಚ್ಚಳದ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಕೆಎಂಎಫ್ ಆಡಳಿತ ಮಂಡಳಿಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST