ಮಂಗಳೂರು, ಸೆ. 28 : (ಸಮದರ್ಶಿ ಸುದ್ದಿ) - ರಾಜ್ಯದಲ್ಲಿ ನಡೆಯುತ್ತಿರುವ ದೋಷಪೂರಿತ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಹಾಗೂ 2023ರಿಂದ ಚುನಾವಣಾ ಆಯೋಗ ಕೈಗೊಂಡಿರುವ ಪ್ರಮುಖ ಪ್ರಕ್ರಿಯೆಗಳು ಮತ್ತು ನಿರ್ಧಾರಗಳ ಕುರಿತು ಸುಪ್ರೀಂ ಕೋರ್ಟ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಖ್ಯಾತ ಚಲನಚಿತ್ರ ನಟ ಹಾಗೂ ರಾಜ್ಯದ ಎಸ್‌ಐಆರ್ ಪರಿಶೋಧ ಮತ್ತು ಪ್ರತಿರೋಧ ಅಭಿಯಾನದ ಮುಖಂಡ ಪ್ರಕಾಶ ರಾಜ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1950ರಿಂದ ಚುನಾವಣಾ ಆಯೋಗವು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಅದರ ಪ್ರಮುಖ ಹೊಣೆಗಾರಿಕೆಯಾಗಿದೆ. ಆದರೆ ಈಗ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು.
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಹಾಗೂ ನುಸುಳುಕೋರರನ್ನು ಗುರುತಿಸಿ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸುವ ಉದ್ದೇಶದಿಂದ ಎಸ್‌ಐಆರ್ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿತ್ತು. ಆದರೆ ದೇಶಾದ್ಯಂತ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದ ಪ್ರಕಾಶ ರಾಜ್, ಇವರಲ್ಲಿ ನುಸುಳುಕೋರರು ಎಷ್ಟು ಮಂದಿ ಎಂಬ ವಿವರವನ್ನು ಆಯೋಗ ಇದುವರೆಗೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಸುಮಾರು ಐದೂವರೆ ಕೋಟಿ ಮತದಾರರಿದ್ದು, ಇಷ್ಟು ದೊಡ್ಡ ಪ್ರಮಾಣದ ಮತದಾರರ ಪರಿಶೀಲನೆಗೆ ಸಾಕಷ್ಟು ಕಾಲಾವಕಾಶ ಅಗತ್ಯವಿದೆ. ಆದರೆ ಚುನಾವಣಾ ಆಯೋಗ ಆರಂಭದಲ್ಲಿ ಕೇವಲ ಒಂದು ತಿಂಗಳ ಗಡುವು ನೀಡಿ, ನಂತರ 15 ದಿನಗಳ ಕಾಲಾವಕಾಶ ಮಾತ್ರ ವಿಸ್ತರಿಸಿದೆ. ಹೆಚ್ಚಿನ ಸಮಯ ನೀಡುವಂತೆ ರಾಜ್ಯ ಸರ್ಕಾರ ಮಾಡಿದ ಮನವಿಗೂ ಸಮರ್ಪಕ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅವರು ದೂರಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜೀವಂತ ವ್ಯಕ್ತಿಗಳನ್ನು ಮೃತಪಟ್ಟವರ ಪಟ್ಟಿಗೆ ಸೇರಿಸಿರುವುದು, ಗಣತಿದಾರರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಅವರನ್ನು ಗುರುತಿಸುವ ವಿಧಾನ, ಅನಾರೋಗ್ಯಪೀಡಿತರು, ಅನಕ್ಷರಸ್ಥರು, ಲಿಂಗ ಪರಿವರ್ತಿತರು, ಉದ್ಯೋಗಕ್ಕಾಗಿ ಊರಿನಿಂದ ಹೊರಗಿರುವವರು ಹಾಗೂ ಅಗತ್ಯ ದಾಖಲೆಗಳನ್ನು ತಕ್ಷಣ ಒದಗಿಸಲಾಗದವರು ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಿಸುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ಹೇಳಿದರು.
ಕೆಲವು ಕಡೆ ಬಿಎಲ್‌ಒಗಳಿಗೆ ಸಮರ್ಪಕ ಮಾಹಿತಿ ಮತ್ತು ತರಬೇತಿ ಇಲ್ಲ. ಫಾರಂ ಸಂಖ್ಯೆ 6 ಮತ್ತು 8ರ ಪ್ರಕ್ರಿಯೆಯ ಬಗ್ಗೆಯೂ ಗೊಂದಲವಿದ್ದು, ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ಕಾರ್ಯವೈಖರಿಯನ್ನೂ ಪ್ರಕಾಶ ರಾಜ್ ತೀವ್ರವಾಗಿ ಟೀಕಿಸಿದರು. ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದರೂ ನಿರ್ಧಾರ ಪ್ರಕ್ರಿಯೆ ಕೇಂದ್ರೀಕೃತವಾಗುತ್ತಿದೆ ಎಂದು ಆರೋಪಿಸಿದ ಅವರು, ಈ ವಿಷಯವನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಸಂಸದರು ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಅವರು, ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ನ್ಯಾಯಾಲಯದವರೆಗೂ ವಿವಾದ ತಲುಪಿದೆ. ಪರಿಶೀಲನೆಗೆ ಒಳಪಟ್ಟವರಲ್ಲಿ ಹೆಚ್ಚಿನವರು ಅರ್ಹ ಮತದಾರರಾಗಿರುವುದು ಕಂಡುಬಂದಿದೆ ಎಂದು ಅವರು ಪ್ರತಿಪಾದಿಸಿದರು.
ಜಾರ್ಖಂಡ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಫಾರಂ ಸಂಖ್ಯೆ 7ರ ಮೂಲಕ ಸುಮಾರು 200 ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣವನ್ನೂ ಅವರು ಉಲ್ಲೇಖಿಸಿದರು. ಕರ್ನಾಟಕದಲ್ಲಿಯೂ ಎಸ್‌ಐಆರ್ ಆರಂಭವಾದಾಗಿನಿಂದ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಈಗ ಅವುಗಳಿಗೆ ಪುಷ್ಟಿ ನೀಡುವಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 1.08 ಕೋಟಿ ಮತದಾರರನ್ನು ಮೃತಪಟ್ಟವರು, ಸ್ಥಳಾಂತರಗೊಂಡವರು, ವಲಸೆ ಹೋದವರು, ಸಮೀಕ್ಷೆ ಸಂದರ್ಭದಲ್ಲಿ ಹಾಜರಿಲ್ಲದವರು ಸೇರಿದಂತೆ ವಿವಿಧ ವರ್ಗಗಳಲ್ಲಿ ಪ್ರತ್ಯೇಕಿಸಲಾಗಿದೆ ಎಂದು ಹೇಳಿದ ಅವರು, ಇವರಲ್ಲಿ ಹಲವರಿಗೆ ಸೂಕ್ತ ಸೂಚನೆ ನೀಡಲಾಗಿಲ್ಲ ಎಂದು ದೂರಿದರು. ಕೊನೆಯ ಎರಡು–ಮೂರು ದಿನಗಳಲ್ಲಿ ಫಾರಂ ಸಂಖ್ಯೆ 7ರ ಮೂಲಕ ಮುಸ್ಲಿಮರು, ಕ್ರೈಸ್ತರು ಹಾಗೂ ಬುಡಕಟ್ಟು ಸಮುದಾಯದ ಮತದಾರರ ಹೆಸರುಗಳಿಗೆ ಸಂಬಂಧಿಸಿದ ಅರ್ಜಿಗಳು ದೊಡ್ಡ ಸಂಖ್ಯೆಯಲ್ಲಿ ಸಲ್ಲಿಕೆಯಾಗಿವೆ ಎಂಬ ಮಾಹಿತಿ ದೊರೆತಿದೆ ಎಂದರು.
ಈ ಹಿನ್ನೆಲೆಯಲ್ಲಿ ಎಸ್‌ಐಆರ್ ಪರಿಶೋಧ ಮತ್ತು ಪ್ರತಿರೋಧ ಅಭಿಯಾನವು ರಾಜ್ಯಾದ್ಯಂತ ವಿವಿಧ ನಾಗರಿಕ ಸಂಘಟನೆಗಳೊಂದಿಗೆ ಸೇರಿ ಪರಿಶೀಲನೆ ನಡೆಸಲಿದೆ. ಸುಮಾರು 100 ಮತಗಟ್ಟೆ ವ್ಯಾಪ್ತಿಯಲ್ಲಿ ಸಾಮಾಜಿಕ ಸಮೀಕ್ಷೆ ನಡೆಸಿ, ಕಂಡುಬರುವ ಅಂಶಗಳನ್ನು ರಾಜ್ಯ ಸಚಿವ ಸಂಪುಟದ ಸದಸ್ಯರು ಹಾಗೂ ಮಾಧ್ಯಮಗಳ ಮುಂದೆ ಮಂಡಿಸಲಾಗುವುದು ಎಂದು ಪ್ರಕಾಶ ರಾಜ್ ತಿಳಿಸಿದರು.
ಅಕ್ಟೋಬರ್‌ನಲ್ಲಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಎಸ್‌ಐಆರ್ ಕುರಿತು ಹಕ್ಕೊತ್ತಾಯ ನಡೆಸುವ ಉದ್ದೇಶವಿದೆ ಎಂದರು.
ಚುನಾವಣಾ ಆಯೋಗದ ಮೂವರು ಆಯುಕ್ತರಿಗೆ ಸಮಾನ ಅಧಿಕಾರವಿದ್ದರೂ, ಗ್ಯಾನೇಶ ಕುಮಾರ ಅವರ ನೇಮಕ ಪ್ರಕ್ರಿಯೆ ಹಾಗೂ 2023ರಲ್ಲಿ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಕಾನೂನಿನಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಪ್ರಶ್ನೆಗಳಿವೆ ಎಂದು ಪ್ರಕಾಶ್ ರಾಜ್ ಹೇಳಿದರು. ಚುನಾವಣಾ ಆಯೋಗದ ಇತರ ಇಬ್ಬರು ಆಯುಕ್ತರು ಎಸ್‌ಐಆರ್ ಪ್ರಕ್ರಿಯೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವರದಿಗಳ ಹಿನ್ನೆಲೆಯಲ್ಲಿ, 2023ರಿಂದ ಆಯೋಗ ಕೈಗೊಂಡಿರುವ ಕ್ರಮಗಳು ಮತ್ತು ಸಂಬಂಧಿತ ದಾಖಲೆಗಳ ಬಗ್ಗೆ ಸುಪ್ರೀಂ ಕೋರ್ಟ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಐಆರ್ ಪರಿಶೋಧ ಮತ್ತು ಪ್ರತಿರೋಧ ಅಭಿಯಾನದ ಮುಖಂಡರಾದ ಕೆ.ಎಲ್. ಅಶೋಕ, ಅಬ್ದುಲ್ ಮಜೀದ, ವಿನೋದ ಮಸ್ಕರೇನಸ್, ಅಬ್ದುಲ್ ಸಲಾಂ ಸಿ.ಎಚ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.