LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಮೋದಿ ಪದವಿ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾ

ಅಹಮದಾಬಾದ, ಸೆ. 29 : ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟಿನಲ್ಲಿ ಹಿನ್ನಡೆಯಾಗಿದೆ. 2023ರ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದ್ದು, ಅವರಿಗೆ ವಿಧಿಸಲಾಗಿದ್ದ ₹25 ಸಾವಿರ ವೆಚ್ಚವನ್ನೂ ಎತ್ತಿಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಪ್ರಕರಣದ ಒಟ್ಟಾರೆ ಸಂಗತಿಗಳು ಮತ್ತು ಸನ್ನಿವೇಶಗಳನ್ನು ಪರಿಶೀಲಿಸಿದಾಗ ಏಕಸದಸ್ಯ ಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡುವಂತಹ ದೋಷ ಕಂಡುಬಂದಿಲ್ಲ ಎಂದು ಪೀಠ ತಿಳಿಸಿದೆ.

2016ರಲ್ಲಿ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸುವಂತೆ ಕೋರಿದ್ದರು. ಆಗ ಕೇಂದ್ರ ಮಾಹಿತಿ ಆಯೋಗವು ದಿಲ್ಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ಮೋದಿ ಅವರ ಪದವಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹುಡುಕಿ ಮಾಹಿತಿ ನೀಡುವಂತೆ ನಿರ್ದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯ ಹೈಕೋರ್ಟ ಮೆಟ್ಟಿಲೇರಿತ್ತು. 2023ರ ಮಾರ್ಚ್ 31ರಂದು ಏಕಸದಸ್ಯ ಪೀಠವು ಕೇಂದ್ರ ಮಾಹಿತಿ ಆಯೋಗದ 2016ರ ನಿರ್ದೇಶನವನ್ನು ರದ್ದುಗೊಳಿಸಿ, ಕೇಜ್ರಿವಾಲ್ ಅವರಿಗೆ ₹25 ಸಾವಿರ ವೆಚ್ಚ ವಿಧಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ವಿಭಾಗೀಯ ಪೀಠ ಸೆಪ್ಟೆಂಬರ್ 24ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ 2023ರ ಆದೇಶ ಮತ್ತು ₹25 ಸಾವಿರ ವೆಚ್ಚವನ್ನು ಎತ್ತಿಹಿಡಿದಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST