ಹೊಸದಿಲ್ಲಿ, ಸೆ. 29 : - ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮತದಾರರ ಪಟ್ಟಿಗೆ ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆಯನ್ನು ಅಕ್ಟೋಬರ್ 6ರ ನಂದಿಗ್ರಾಮ ಮತ್ತು ರೆಜಿನಗರ ಉಪಚುನಾವಣೆಗೆ ಮುನ್ನ ನಡೆಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ ತಿರಸ್ಕರಿಸಿದೆ. ಈ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು “ಇವು ಕೇವಲ ಉಪಚುನಾವಣೆಗಳು” ಎಂದು ಹೇಳಿರುವುದು ರಾಜಕೀಯ ನಾಯಕರು ಮತ್ತು ಇತರ ಕೆಲವು ವಲಯಗಳಿಂದ ಟೀಕೆಗೆ ಗುರಿಯಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರ ಪೀಠವು ಪ್ರಕರಣವನ್ನು ಅಕ್ಟೋಬರ್ 5ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಈ ಪ್ರಕರಣ ಮೊದಲು ಸೆಪ್ಟೆಂಬರ್ 29ರಂದು ವಿಚಾರಣೆಗೆ ಬರುವ ನಿರೀಕ್ಷೆಯಿತ್ತು.
ಅರ್ಜಿದಾರರ ಪರ ವಕೀಲರು ನಂದಿಗ್ರಾಮ ಮತ್ತು ರೆಜಿನಗರದಲ್ಲಿ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಈ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದ 18 ಸಾವಿರಕ್ಕೂ ಹೆಚ್ಚು ಮೇಲ್ಮನವಿಗಳು ಇನ್ನೂ ಇತ್ಯರ್ಥವಾಗಿಲ್ಲ ಎಂದು ಪೀಠದ ಗಮನಕ್ಕೆ ತಂದರು. ಸಂಬಂಧಿಸಿದ ಮತದಾರರು ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಕಳೆದುಕೊಂಡಿದ್ದು, ಮೇಲ್ಮನವಿಗಳು ಇತ್ಯರ್ಥವಾಗದಿದ್ದರೆ ಎರಡನೇ ಬಾರಿಯೂ ಮತದಾನದಿಂದ ಹೊರಗುಳಿಯಬಹುದು ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್, “ಇವು ಕೇವಲ ಉಪಚುನಾವಣೆಗಳು” ಎಂದು ಹೇಳಿ, ಪ್ರಕರಣವನ್ನು ಅಕ್ಟೋಬರ್ 5ರಂದೇ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು. ಅಂದರೆ ಮತದಾನಕ್ಕೆ ಕೇವಲ ಒಂದು ದಿನ ಮೊದಲು ಪ್ರಕರಣ ಸುಪ್ರೀಂ ಕೋರ್ಟ ಮುಂದೆ ಬರಲಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮತದಾನದ ಹಕ್ಕಿನ ಮಹತ್ವದ ಕುರಿತು ರಾಜಕೀಯ ಮತ್ತು ಸಾರ್ವಜನಿಕ ವಲಯಗಳಲ್ಲಿ ಚರ್ಚೆ ಆರಂಭವಾಗಿದೆ. ಚುನಾವಣೆಯು ಸಾರ್ವತ್ರಿಕ ಚುನಾವಣೆಯಾಗಿರಲಿ ಅಥವಾ ಉಪಚುನಾವಣೆಯಾಗಿರಲಿ, ಅರ್ಹ ಮತದಾರನ ಮತದಾನದ ಅವಕಾಶದ ಮಹತ್ವ ಕಡಿಮೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಟೀಕಾಕಾರರು ವ್ಯಕ್ತಪಡಿಸಿದ್ದಾರೆ.
ಎಸ್‌ಐಆರ್‌ಗೆ ಸಂಬಂಧಿಸಿದ ಮೇಲ್ಮನವಿಗಳ ಪ್ರಮಾಣವೂ ದೊಡ್ಡದಾಗಿದೆ. ಚುನಾವಣಾ ಆಯೋಗ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಒಟ್ಟು 38.31 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 22.21 ಲಕ್ಷ ಮೇಲ್ಮನವಿಗಳು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರು ತಮ್ಮ ಹೆಸರು ಮರುಸೇರ್ಪಡೆ ಮಾಡುವಂತೆ ಸಲ್ಲಿಸಿರುವವು. ಇನ್ನೂ 16.10 ಲಕ್ಷ ಮೇಲ್ಮನವಿಗಳು ಪಟ್ಟಿಯಲ್ಲಿ ಸೇರಿಸಲಾದ ಹೆಸರುಗಳನ್ನು ಪ್ರಶ್ನಿಸಿರುವವು.
ಸೆಪ್ಟೆಂಬರ್ 16ರ ವೇಳೆಗೆ ಕೇವಲ 1,26,194 ಮೇಲ್ಮನವಿಗಳು ಇತ್ಯರ್ಥಗೊಂಡಿದ್ದು, 37,05,235 ಪ್ರಕರಣಗಳು ಬಾಕಿ ಉಳಿದಿದ್ದವು. ಪ್ರಕರಣಗಳ ವಿಲೇವಾರಿ ವೇಗಗೊಳಿಸಲು ಈಗಿರುವ 19 ಮೇಲ್ಮನವಿ ನ್ಯಾಯಮಂಡಳಿಗಳ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸುವ ಪ್ರಸ್ತಾವಕ್ಕೂ ಚುನಾವಣಾ ಆಯೋಗ ಸಿದ್ಧತೆ ವ್ಯಕ್ತಪಡಿಸಿದೆ.
ಹೀಗಾಗಿ ನಂದಿಗ್ರಾಮ ಮತ್ತು ರೆಜಿನಗರದ ಸಾವಿರಾರು ಮತದಾರರ ಮೇಲ್ಮನವಿಗಳು ಬಾಕಿ ಇರುವ ನಡುವೆಯೇ ಅಕ್ಟೋಬರ್ 6ರಂದು ಉಪಚುನಾವಣೆ ನಡೆಯಲಿದ್ದು, ಅದಕ್ಕೆ ಕೇವಲ ಒಂದು ದಿನ ಮೊದಲು ಸುಪ್ರೀಂ ಕೋರ್ಟ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ.