LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಬರ ಪರಿಶೀಲನೆಗೆ ಕೇಂದ್ರದ 3 ತಂಡ

ಬೆಂಗಳೂರು, ಸೆ. 28 : (ಸಮದರ್ಶಿ ಸುದ್ದಿ) - ರಾಜ್ಯದ ಬರ ಪರಿಸ್ಥಿತಿ ಪರಿಶೀಲಿಸಲು ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಭೇಟಿ ನೀಡಲಿವೆ ಎಂದು ಕಂದಾಯ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಂಡ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ, ಮತ್ತೊಂದು ತಂಡ ಉತ್ತರ ಕರ್ನಾಟಕದಲ್ಲಿ ಹಾಗೂ ಮೂರನೇ ತಂಡ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದರು.

ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಸ್ಥಳ ಪರಿಶೀಲನೆಯ ಬಳಿಕ ಮತ್ತೊಂದು ಅಂತಿಮ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೇಂದ್ರದ ಮಾರ್ಗಸೂಚಿಗಳ ಆಧಾರದಲ್ಲಿಯೇ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ಪ್ರಸ್ತುತ ಹೆಚ್ಚುವರಿ ‘ಗ್ರೌಂಡ್ ಟ್ರೂಥಿಂಗ್’ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಅಂತಿಮ ವರದಿ ಸಿದ್ಧಪಡಿಸಲಾಗುವುದು. ಸೆ.30ಕ್ಕೆ ಮುಂಗಾರು ಅವಧಿ ಮುಕ್ತಾಯವಾಗಲಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಕೇಂದ್ರಕ್ಕೆ ಅಂತಿಮ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಉಂಟಾಗಿರುವ ನಷ್ಟ, ರೈತರ ಪರಿಸ್ಥಿತಿ ಹಾಗೂ ಅಗತ್ಯ ಪರಿಹಾರದ ಕುರಿತು ಸಮಗ್ರ ಮಾಹಿತಿ ಕೇಂದ್ರಕ್ಕೆ ನೀಡಲಾಗುವುದು ಎಂದು ಪರಮೇಶ್ವರ ಹೇಳಿದರು.

ಬರ ಪರಿಹಾರಕ್ಕಾಗಿ ಸರ್ವಪಕ್ಷ ನಿಯೋಗ ಕರೆದೊಯ್ಯುವ ಅಗತ್ಯವನ್ನು ಪುನರುಚ್ಚರಿಸಿದ ಅವರು, ಬಿಜೆಪಿ ನಾಯಕರನ್ನೂ ಮತ್ತೊಮ್ಮೆ ನಿಯೋಗದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುವುದು ಎಂದರು. “ಬರ ಯಾವುದೇ ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ. ಇದು ಕರ್ನಾಟಕದ ಜನರ ಹಿತಾಸಕ್ತಿಯ ಪ್ರಶ್ನೆ. ಎಲ್ಲರೂ ಜವಾಬ್ದಾರಿ ಹಂಚಿಕೊಳ್ಳಬೇಕು” ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪರಿಹಾರ ದೊರೆಯದಿದ್ದರೂ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಕಳೆದ ವರ್ಷದಂತೆ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಪರಮೇಶ್ವರ ಮನವಿ ಮಾಡಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST