ನಾಗೋಯಾ, ಸೆ. 29 : ಏಷ್ಯನ್ ಕ್ರೀಡಾಕೂಟದ ಮಹಿಳೆಯರ 4x400 ಮೀಟರ್ಸ್ ರಿಲೆಯಲ್ಲಿ ಭಾರತದ ತಂಡ ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದೆ. ಇದರೊಂದಿಗೆ ಈ ಬಾರಿಯ ಏಷ್ಯನ್ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಲಭಿಸಿದೆ.
ಕನ್ನಡತಿ ಎಂ.ಆರ್. ಪೂವಮ್ಮ, ಕಿರಣ್ ಪಹಲ್, ಪ್ರಾಚಿ ಹಾಗೂ ವಿದ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ ಮಂಗಳವಾರ ನಡೆದ ಫೈನಲ್‌ನಲ್ಲಿ 3 ನಿಮಿಷ 29.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆಯಿತು. ಬಹರೇನ್ 3:30.21 ಸಮಯದೊಂದಿಗೆ ಬೆಳ್ಳಿ ಹಾಗೂ ಚೀನಾ 3:31.02 ಸಮಯದೊಂದಿಗೆ ಕಂಚಿನ ಪದಕ ಗಳಿಸಿತು.
ಭಾರತದ ಅಥ್ಲೆಟಿಕ್ಸ್ ತಂಡಕ್ಕೆ ಮಂಗಳವಾರ ಮತ್ತಷ್ಟು ಪದಕಗಳು ಒಲಿದವು. 4x100 ಮೀಟರ್ಸ್ ಮಿಶ್ರ ರಿಲೆಯಲ್ಲಿ ಗುರಿಂದರ್‌ವೀರ್ ಸಿಂಗ್, ಅನಿಮೇಶ್ ಕುಜೂರ್, ಸ್ನೇಹಾ ಸತ್ಯನಾರಾಯಣ ಮತ್ತು ಹರಿತಾ ಭದ್ರಾ ಅವರ ತಂಡ ಕಂಚಿನ ಪದಕ ಜಯಿಸಿತು. ಮಹಿಳೆಯರ ಹೈಜಂಪ್‌ನಲ್ಲಿ 19 ವರ್ಷದ ಪೂಜಾ ಸಿಂಗ್ ಕಂಚಿನ ಪದಕ ಪಡೆದರು.
ಪುರುಷರ 5000 ಮೀಟರ್ಸ್ ಓಟದಲ್ಲಿ ಗುಲ್ವೀರ್ ಸಿಂಗ್ 13 ನಿಮಿಷ 32.75 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದು ಈ ಕ್ರೀಡಾಕೂಟದಲ್ಲಿ ಅವರ ಮೂರನೇ ಪದಕವಾಗಿದೆ.