ಗುವಾಹಟಿ, ಸೆ. 29 : ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಚಾಂಗ್‌ಲಾಂಗ್ ಜಿಲ್ಲೆಯ ಭಾರತ-ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ಬೇಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರ ಭದ್ರತೆಗಾಗಿ ಅಸ್ಸಾಂ ರೈಫಲ್ಸ್ ಯೋಧರು ಗಸ್ತು ತಿರುಗುತ್ತಿದ್ದರು. ಮಂಗಳವಾರ ಬೆಳಿಗ್ಗೆ ಸುಮಾರು 6.30ರ ವೇಳೆಗೆ ಶಂಕಿತ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಜಾಂಗ್‌ಖೋಕೈ ಕುಕಿ (42) ಹುತಾತ್ಮರಾಗಿದ್ದಾರೆ. ಗಾಯಗೊಂಡ ನಾಲ್ವರು ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆ-ವೈಎ (K-YA) ಬಂಡುಕೋರ ಗುಂಪು ದಾಳಿಯ ಹಿಂದೆ ಇರಬಹುದು ಎಂದು ಭದ್ರತಾ ಪಡೆಗಳ ಮೂಲಗಳು ಶಂಕಿಸಿವೆ. ಆದರೆ ದಾಳಿಕೋರರ ಗುರುತು ಕುರಿತು ಅಧಿಕೃತ ದೃಢೀಕರಣ ಇನ್ನೂ ಹೊರಬಿದ್ದಿಲ್ಲ.
ಘಟನೆಯ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ. ಭಾರತ-ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಚಾಂಗ್‌ಲಾಂಗ್ ಜಿಲ್ಲೆ ಭದ್ರತಾ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶವಾಗಿದ್ದು, ದಾಳಿಯ ನಂತರ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.