ಬೆಂಗಳೂರು, ಸೆ. 25 : (ಸಮದರ್ಶಿ ಸುದ್ದಿ) - ದೀಪಾವಳಿ, ಪೂಜಾ ಹಾಗೂ ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್‌ಎಂಟಿ) ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ನಡುವೆ ವಿಶೇಷ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಈ ಸೇವೆಯಿಂದ ಬೆಳಗಾವಿ ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ರೈಲು ಸಂಖ್ಯೆ 01013 ಮುಂಬೈ–ಬೆಂಗಳೂರು ವಿಶೇಷ ರೈಲು ಅ.10ರಿಂದ ನ.21ರವರೆಗೆ ಪ್ರತಿ ಶನಿವಾರ ಮುಂಬೈನಿಂದ ಮಧ್ಯರಾತ್ರಿ 12.35ಕ್ಕೆ ಹೊರಟು ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ತಲುಪಲಿದೆ. ಒಟ್ಟು ಏಳು ಟ್ರಿಪ್‌ಗಳು ಸಂಚರಿಸಲಿವೆ.
ಮರುಪ್ರಯಾಣದಲ್ಲಿ ರೈಲು ಸಂಖ್ಯೆ 01014 ಬೆಂಗಳೂರು–ಮುಂಬೈ ವಿಶೇಷ ರೈಲು ಅ.11ರಿಂದ ನ.22ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 4.05ಕ್ಕೆ ಮುಂಬೈ ತಲುಪಲಿದೆ. ಈ ರೈಲೂ ಏಳು ಟ್ರಿಪ್‌ಗಳನ್ನು ನಡೆಸಲಿದೆ.
ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ದಾದರ್, ಥಾಣೆ, ಕಲ್ಯಾಣ, ಲೋನಾವಾಲಾ, ಪುಣೆ, ಲೋನಂದ, ಸತಾರಾ, ಕರಾಡ, ಸಾಂಗ್ಲಿ, ಮಿರಜ, ಕುಡಚಿ, ರಾಯಬಾಗ, ಘಟಪ್ರಭಾ, ಬೆಳಗಾವಿ, ಲೊಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಹಾಗೂ ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ರೈಲಿನಲ್ಲಿ 2 ಎಸಿ 2-ಟೈರ್, 18 ಎಸಿ 3-ಟೈರ್ ಹಾಗೂ 2 ಲಗೇಜ್-ಕಮ್-ಗಾರ್ಡ್-ಕಮ್-ಜನರೇಟರ್ ವ್ಯಾನ್ ಸೇರಿದಂತೆ ಒಟ್ಟು 22 ಬೋಗಿಗಳು ಇರಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.