ಹೊಸದಿಲ್ಲಿ, ಸೆ. 28 : - ತೃಣಮೂಲ ಕಾಂಗ್ರೆಸ್‌ನ ಎರಡು ಬಣಗಳ ನಡುವಿನ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆ ವಿವಾದವನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ ಸೋಮವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರ ಪೀಠವು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ (ಎಐಟಿಸಿ) ಹೆಸರು ಹಾಗೂ ಅದರ ‘ಹೂವು ಮತ್ತು ಹುಲ್ಲು’ ಚುನಾವಣಾ ಚಿಹ್ನೆಯನ್ನು ತಡೆಹಿಡಿಯಲು ಚುನಾವಣಾ ಆಯೋಗ ಸೆ.17ರಂದು ಕೈಗೊಂಡಿದ್ದ ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದರು.
ಎರಡೂ ಬಣಗಳಿಗೆ ಅಗತ್ಯ ಪ್ರತಿಕ್ರಿಯೆ ಮತ್ತು ಸಾಕ್ಷ್ಯಗಳನ್ನು ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದ್ದು, ಅದರ ನಂತರ ಮೂರು ತಿಂಗಳ ಕಾಲಮಿತಿ ಆರಂಭವಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗದ ಪರ ವಾದಿಸಿದ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ಡು, ಪಕ್ಷದ ಕಾರ್ಯಕರ್ತರಿಂದ ಲಕ್ಷಾಂತರ ಪ್ರಮಾಣಪತ್ರಗಳು ಸಲ್ಲಿಕೆಯಾಗುವ ಸಾಧ್ಯತೆ ಇರುವುದರಿಂದ ವಿವಾದ ಇತ್ಯರ್ಥಕ್ಕೆ ಸಮಯ ಬೇಕಾಗುತ್ತದೆ ಎಂದು ತಿಳಿಸಿದರು.
ಮಮತಾ ಬ್ಯಾನರ್ಜಿ ಬಣ ಈಗಾಗಲೇ ತನ್ನ ಪ್ರತಿಕ್ರಿಯೆ ಸಲ್ಲಿಸಿದ್ದು, ಎದುರಾಳಿ ಬಣದ ಪ್ರತಿಕ್ರಿಯೆ ಇನ್ನೂ ಬಾಕಿಯಿದೆ ಎಂದು ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಕಲ್ಯಾಣ್ ಬಂಡೋಪಾಧ್ಯಾಯ ನ್ಯಾಯಾಲಯಕ್ಕೆ ತಿಳಿಸಿದರು.
ಮುಂಬರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸೆ.17ರಂದು ಪಕ್ಷದ ಮೂಲ ಹೆಸರು ಮತ್ತು ಚಿಹ್ನೆಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಎರಡೂ ಬಣಗಳಿಗೆ ಪ್ರತ್ಯೇಕ ಹೆಸರು ಹಾಗೂ ಚಿಹ್ನೆಗಳನ್ನು ಹಂಚಿಕೆ ಮಾಡಿತ್ತು. ಈ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ್ದರು.