ಹೊಸದಿಲ್ಲಿ, ಸೆ. 28 : (ಸಮದರ್ಶಿ ಸುದ್ದಿ) - ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೀಡಿರುವ ದೇಶವ್ಯಾಪಿ ಪ್ರತಿಭಟನಾ ಕರೆಗೆ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಬೆಂಬಲ ವ್ಯಕ್ತಪಡಿಸಿದ್ದಾರೆ.
“ದೇಶಕ್ಕೆ ಸ್ವಚ್ಛ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆ ಅತ್ಯಂತ ಅಗತ್ಯ. ಈ ಉದ್ದೇಶಕ್ಕಾಗಿ ನೀಡಿರುವ ಪ್ರತಿಭಟನಾ ಕರೆಗೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ವಾಂಗ್ಚುಕ್ ಹೇಳಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತ ವಿವಾದದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 2ರಿಂದ ದೇಶವ್ಯಾಪಿ ಪ್ರತಿಭಟನೆ ಆರಂಭಿಸುವುದಾಗಿ ಅಭಿಜೀತ ದೀಪ್ಕೆ ನೇತೃತ್ವದ ಸಿಜೆಪಿ ಎಚ್ಚರಿಕೆ ನೀಡಿದೆ. ಮುಂಬೈನಿಂದ ಹೋರಾಟಕ್ಕೆ ಚಾಲನೆ ನೀಡುವುದಾಗಿಯೂ ಸಂಘಟನೆ ತಿಳಿಸಿದೆ.
ಸಿಜೆಪಿಯ ಹೋರಾಟದ ಕುರಿತು ಪ್ರತಿಕ್ರಿಯಿಸಿದ ವಾಂಗ್ಚುಕ್, “ಅವರು ದುರ್ಬಲರಾಗಿದ್ದಾಗ ಜಂತರ್ ಮಂತರ್‌ನಲ್ಲಿ ನಡೆದ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡಿದ್ದೆ. ಈಗ ಅವರ ಧ್ವನಿ ಬಲಿಷ್ಠವಾಗಿದೆ. ಆ ಧ್ವನಿ ದೇಶವನ್ನು ಅಲುಗಾಡಿಸುವಷ್ಟು ಪ್ರಬಲವಾಗಲಿ ಎಂದು ಆಶಿಸುತ್ತೇನೆ” ಎಂದಿದ್ದಾರೆ.
ಆದರೆ, ಈ ಬಾರಿ ಪ್ರತಿಭಟನೆಯಲ್ಲಿ ತಾವು ಖುದ್ದಾಗಿ ಭಾಗವಹಿಸುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಉತ್ತರದಾಯಿತ್ವವನ್ನು ಬಲಪಡಿಸುವ ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವ ಪ್ರಯತ್ನಗಳಿಗೆ ಬೆಂಬಲ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಜೆಪಿ ಸ್ವಯಂಪ್ರೇರಿತವಾಗಿ ಹೋರಾಟ ನಡೆಸುತ್ತಿರುವುದನ್ನು ಉಲ್ಲೇಖಿಸಿದ ವಾಂಗ್ಚುಕ್, ಈ ವಿಷಯಕ್ಕೆ ಈಗಾಗಲೇ ಹಲವರ ಬೆಂಬಲ ದೊರೆಯುತ್ತಿರುವುದರಿಂದ ತಾವು ನೇರವಾಗಿ ಹೋರಾಟದಲ್ಲಿ ಭಾಗವಹಿಸುವ ಅಗತ್ಯವಿಲ್ಲವೆಂದು ಭಾವಿಸಿರುವುದಾಗಿ ಹೇಳಿದ್ದಾರೆ.
ಈ ಹಿಂದೆ ಜಂತರ್ ಮಂತರ್‌ನಲ್ಲಿ ನಡೆದ ಸುದೀರ್ಘ ಪ್ರತಿಭಟನೆಯ ಸಂದರ್ಭದಲ್ಲೂ ಸಿಜೆಪಿಗೆ ವಾಂಗ್ಚುಕ್ ಬೆಂಬಲ ನೀಡಿದ್ದರು.