ಹೊಸದಿಲ್ಲಿ, ಸೆ. 25 : (ಸಮದರ್ಶಿ ಸುದ್ದಿ) - ದೇಶದ ಜಿಲ್ಲಾ ನ್ಯಾಯಾಲಯಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಸಿವಿಲ್ ಎಕ್ಸಿಕ್ಯೂಷನ್ ಅರ್ಜಿಗಳು ಬಾಕಿ ಉಳಿದಿರುವುದಕ್ಕೆ ಸುಪ್ರೀಂ ಕೋರ್ಟ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಆರು ತಿಂಗಳಿಗೊಮ್ಮೆ ಬಾಕಿ ಪ್ರಕರಣಗಳ ಅಂಕಿ-ಅಂಶ ಸಂಗ್ರಹಿಸುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಪ್ರಕರಣಗಳ ತ್ವರಿತ ವಿಲೇವಾರಿಗೆ ಶಾಶ್ವತ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಬೇಕು ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ ಚಂದ್ರನ್ ಅವರ ಪೀಠವು ವಿವಿಧ ಹೈಕೋರ್ಟಗಳು ಸಲ್ಲಿಸಿರುವ ಅನುಷ್ಠಾನ ವರದಿಗಳನ್ನು ಪರಿಶೀಲಿಸಿತು. 2025ರ ಮಾರ್ಚ್ 6ರಂದು ಸುಮಾರು ನಾಲ್ಕು ದಶಕಗಳಿಂದ ಬಾಕಿಯಿದ್ದ ಆಸ್ತಿ ವಿವಾದದ ತೀರ್ಪಿನಲ್ಲಿ, ಅಧೀನ ನ್ಯಾಯಾಲಯಗಳು ಎಕ್ಸಿಕ್ಯೂಷನ್ ಅರ್ಜಿಗಳನ್ನು ಆರು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ ನಿರ್ದೇಶಿಸಿತ್ತು.
ಅಮಿಕಸ್ ಕ್ಯೂರಿ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್ ಅವರು ಹೈಕೋರ್ಟಗಳ ಪ್ರತಿಕ್ರಿಯೆಗಳನ್ನು ಪೀಠಕ್ಕೆ ಸಲ್ಲಿಸಿದರು. ಮಧ್ಯಂತರ ತಡೆಯಾಜ್ಞೆ, ಆಕ್ಷೇಪಣಾ ಅರ್ಜಿಗಳು, ವಕೀಲರ ಗೈರುಹಾಜರಿ, ಪದೇಪದೇ ವಿಚಾರಣೆ ಮುಂದೂಡುವಿಕೆ, ತೀರ್ಪಿನ ಸಾಲಗಾರರಿಗೆ ನೋಟಿಸ್ ತಲುಪದಿರುವುದು ಹಾಗೂ ಅವರ ಆಸ್ತಿಗಳ ಮಾಹಿತಿ ಲಭ್ಯವಾಗದಿರುವುದು ವಿಳಂಬಕ್ಕೆ ಪ್ರಮುಖ ಕಾರಣಗಳೆಂದು ವಿವರಿಸಲಾಯಿತು.
ಕಮರ್ಷಿಯಲ್ ಕೋರ್ಟ ನಿಯಮಗಳಲ್ಲಿರುವ ವಿಶೇಷ ಮೇಲ್ವಿಚಾರಣಾ ಸೆಲ್ ಮಾದರಿಯಲ್ಲಿ ಎಕ್ಸಿಕ್ಯೂಷನ್ ಅರ್ಜಿಗಳ ವಿಲೇವಾರಿಯನ್ನೂ ನಿರಂತರವಾಗಿ ಗಮನಿಸಲು ಪ್ರತ್ಯೇಕ ವ್ಯವಸ್ಥೆ ರೂಪಿಸುವ ಸಾಧ್ಯತೆಯನ್ನು ಪೀಠ ಪ್ರಸ್ತಾಪಿಸಿತು. ಇದುವರೆಗೆ ಒಂದು ಹೈಕೋರ್ಟ ಮಾತ್ರ ಇಂತಹ ಸೆಲ್ ಸ್ಥಾಪಿಸಿದೆ ಎಂದು ತಿಳಿಸಿದಾಗ, “ಉಳಿದ ಹೈಕೋರ್ಟಗಳು ಇದನ್ನು ಏಕೆ ಪರಿಗಣಿಸುತ್ತಿಲ್ಲ?” ಎಂದು ಪೀಠ ಪ್ರಶ್ನಿಸಿತು.
ಕೇವಲ ಎಷ್ಟು ಅರ್ಜಿಗಳು ಬಾಕಿಯಿವೆ, ಎಷ್ಟು ವಿಲೇವಾರಿಯಾಗಿವೆ ಎಂಬ ಅಂಕಿ-ಅಂಶ ಕೇಳುವುದರಿಂದ ಸಾಲದು; ವಾಸ್ತವವಾಗಿ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುವ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ವಿಚಾರಣೆಯಲ್ಲಿ ಚರ್ಚಿಸಲಾದ ಅಂಶಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಸಲ್ಲಿಸುವಂತೆ ಅಮಿಕಸ್ ಕ್ಯೂರಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿರುವ ಸುಪ್ರೀಂ ಕೋರ್ಟ, ಮುಂದಿನ ವಿಚಾರಣೆಯನ್ನು ಅಕ್ಟೋಬರ 7ಕ್ಕೆ ನಿಗದಿಪಡಿಸಿದೆ.