LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ವಾಣಿಜ್ಯ ಸಿಲಿಂಡರ್‌ ₹62.50 ಏರಿಕೆ; ವಿಮಾನ ಇಂಧನವೂ ದುಬಾರಿ

ಹೊಸದಿಲ್ಲಿ, ಅ. 1 : ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಹಾಗೂ ವಿಮಾನ ಇಂಧನ (ಎಟಿಎಫ್‌) ದರಗಳನ್ನು ಹೆಚ್ಚಿಸಿದ್ದು, ಪರಿಷ್ಕೃತ ದರಗಳು ಗುರುವಾರದಿಂದಲೇ ಜಾರಿಗೆ ಬಂದಿವೆ. 19 ಕೆ.ಜಿ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ₹62.50 ಹೆಚ್ಚಾಗಿ ₹2,810ಕ್ಕೆ ತಲುಪಿದೆ.

ಹೋಟೆಲ್‌, ರೆಸ್ಟೋರೆಂಟ್‌, ಕ್ಯಾಂಟೀನ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳು ಹೆಚ್ಚಾಗಿ ಬಳಸುವ 19 ಕೆ.ಜಿ. ಸಿಲಿಂಡರ್ ದರ ಸೆಪ್ಟೆಂಬರ್‌ನಲ್ಲಿ ₹2,747.50 ಇತ್ತು. ಇದೀಗ ₹62.50 ಏರಿಕೆಯೊಂದಿಗೆ ₹2,810 ಆಗಿದೆ. ನಗರ ಮತ್ತು ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ದೇಶದ ವಿವಿಧ ಭಾಗಗಳಲ್ಲಿ ದರಗಳು ಬದಲಾಗುತ್ತವೆ. ಮುಂಬೈನಲ್ಲಿ ಸಿಲಿಂಡರ್ ದರ ₹2,764 ಹಾಗೂ ಚೆನ್ನೈನಲ್ಲಿ ₹2,983ಕ್ಕೆ ಏರಿಕೆಯಾಗಿದೆ.

ಸೆಪ್ಟೆಂಬರ್‌ನಲ್ಲಿಯೂ ವಾಣಿಜ್ಯ ಸಿಲಿಂಡರ್ ದರ ₹9.50 ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು ಆಗಸ್ಟ್‌ನಲ್ಲಿ ₹192 ಹಾಗೂ ಜುಲೈನಲ್ಲಿ ₹183.50 ಕಡಿತ ಮಾಡಲಾಗಿತ್ತು. ಫೆಬ್ರವರಿಯಿಂದ ಜೂನ್‌ವರೆಗೆ 19 ಕೆ.ಜಿ. ಸಿಲಿಂಡರ್ ದರ ಒಟ್ಟು ₹1,373 ಏರಿಕೆಯಾಗಿದ್ದು, ₹1,740.50ರಿಂದ ದಾಖಲೆಯ ₹3,113.50ಕ್ಕೆ ತಲುಪಿತ್ತು.

ವಿಮಾನ ಇಂಧನ ₹16 ಏರಿಕೆ

ವಿಮಾನಯಾನ ಸಂಸ್ಥೆಗಳಿಗೂ ಇಂಧನ ದರ ಏರಿಕೆಯ ಹೊರೆ ಬಿದ್ದಿದೆ. ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಪೂರೈಸುವ ಎಟಿಎಫ್‌ ದರವನ್ನು ಲೀಟರ್‌ಗೆ ಸುಮಾರು ₹16 ಹೆಚ್ಚಿಸಲಾಗಿದ್ದು, ₹121ರಿಂದ ₹137ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ₹6.28 ಹಾಗೂ ಆಗಸ್ಟ್‌ನಲ್ಲಿ ₹5ರಷ್ಟು ದರ ಏರಿಸಲಾಗಿತ್ತು.

ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಎಟಿಎಫ್‌ ಪಾಲು ಶೇ.40ರವರೆಗೆ ಇರುವುದರಿಂದ ಇಂಧನ ದರ ಏರಿಕೆ ವಿಮಾನಯಾನ ಕಂಪನಿಗಳ ವೆಚ್ಚದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ವಿಮಾನ ಪ್ರಯಾಣ ದರಗಳ ಮೇಲೂ ಒತ್ತಡ ಉಂಟಾಗುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಇಂಧನ ಬೆಲೆ ಹಾಗೂ ರೂಪಾಯಿ–ಡಾಲರ್ ವಿನಿಮಯ ದರದಲ್ಲಿನ ಬದಲಾವಣೆಗಳನ್ನು ಆಧರಿಸಿ ಎಲ್‌ಪಿಜಿ ಮತ್ತು ಎಟಿಎಫ್‌ ದರಗಳನ್ನು ಪರಿಷ್ಕರಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸಲಾಗುತ್ತದೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ ಗೃಹಬಳಕೆಯ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ ಅದು ₹942ರಲ್ಲೇ ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಗುರುವಾರ ಯಾವುದೇ ಬದಲಾವಣೆಯಾಗಿಲ್ಲ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST