ಹೊಸದಿಲ್ಲಿ, ಅ. 1 : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆಗೆ ಐಪಿಎಸ್ ಅಧಿಕಾರಿ ಅಲೋಕ ಕುಮಾರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕರ್ನಾಟಕ ಹೈಕೋರ್ಟ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ ಮಧ್ಯಂತರ ತಡೆ ನೀಡಿದೆ.
ಹೈಕೋರ್ಟ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಕರಣದಲ್ಲಿ ಸಿಐಡಿ ಈಗಾಗಲೇ ಸಮಗ್ರ ತನಿಖೆ ನಡೆಸುತ್ತಿದ್ದು, ಅದರ ತನಿಖೆಯಲ್ಲಿ ಲೋಪವಿದೆ ಎಂಬ ಯಾವುದೇ ನಿರ್ಣಯವಿಲ್ಲದಿದ್ದರೂ ಪ್ರತ್ಯೇಕ ಎಸ್‌ಐಟಿ ರಚಿಸಲಾಗಿದೆ ಎಂದು ವಾದಿಸಿದರು. ಅಲೋಕ ಕುಮಾರ ಅವರ ನೇಮಕಕ್ಕೂ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು.
ಇದಕ್ಕೆ ಅಭ್ಯರ್ಥಿಗಳ ಪರ ವಕೀಲರು ವಿರೋಧ ವ್ಯಕ್ತಪಡಿಸಿ, ಸಮರ್ಥ ತನಿಖೆಗಾಗಿ ಹೈಕೋರ್ಟ ಎಸ್‌ಐಟಿ ರಚಿಸಿದೆ. ಅಧಿಕಾರಿಯ ಬಗ್ಗೆ ಆಕ್ಷೇಪವಿದ್ದರೆ ಅದನ್ನು ಹೈಕೋರ್ಟ ಮುಂದೆಯೇ ಪ್ರಸ್ತಾಪಿಸಬಹುದಿತ್ತು ಎಂದು ವಾದಿಸಿದರು.
ವಾದ–ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ, ಹೈಕೋರ್ಟ ಆದೇಶಕ್ಕೆ ಮಧ್ಯಂತರ ತಡೆ ನೀಡಿತು. ಅಲೋಕ್ ಕುಮಾರ ವಿರುದ್ಧ ಸರ್ಕಾರ ಪ್ರಸ್ತಾಪಿಸಿರುವ ಆಕ್ಷೇಪಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿದ್ದು, ಎಸ್‌ಐಟಿ ನೇತೃತ್ವಕ್ಕೆ ಸರ್ಕಾರಕ್ಕೆ ಸಮ್ಮತವಿರುವ ಇತರ ಸಮರ್ಥ ಅಧಿಕಾರಿಗಳ ಪಟ್ಟಿಯನ್ನು ನೀಡಲು ಅವಕಾಶ ಕಲ್ಪಿಸಿದೆ. ಮುಂದಿನ ವಿಚಾರಣೆ ಅಕ್ಟೋಬರ್ 12ರಂದು ನಡೆಯಲಿದೆ.