ಹೊಸದಿಲ್ಲಿ, ಸೆ. 30 : ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಮತದಾರರ ನೋಂದಣಿಗೆ ಬಳಸುವ ಆನ್‌ಲೈನ್ ಫಾರ್ಮ್-6ಗೆ ಸೇರಿಸಲಾಗಿದ್ದ ಹೆಚ್ಚುವರಿ ಎಸ್‌ಐಆರ್ ಘೋಷಣೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ. ಇನ್ನು ಈ ಪ್ರದೇಶಗಳಲ್ಲಿ 1960ರ ಮತದಾರರ ನೋಂದಣಿ ನಿಯಮಗಳಡಿ ನಿಗದಿಪಡಿಸಿರುವ ಸಾಮಾನ್ಯ ಫಾರ್ಮ್-6 ಮೂಲಕವೇ ಹೊಸ ಮತದಾರರು ಅರ್ಜಿ ಸಲ್ಲಿಸಬಹುದು.
ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳಲ್ಲಿ ಇಸಿಐನೆಟ್ ಆ್ಯಪ್ ಮತ್ತು ಪೋರ್ಟಲ್ ಹಾಗೂ ಆಯಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ಗಳಿಂದ ಹೆಚ್ಚುವರಿ ಘೋಷಣೆಯನ್ನು ತೆಗೆದುಹಾಕಲಾಗಿದೆ. ಆದರೆ ಎಸ್‌ಐಆರ್ ಪ್ರಕ್ರಿಯೆ ಇನ್ನೂ ನಡೆಯುತ್ತಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಹೆಚ್ಚುವರಿ ಘೋಷಣೆ ಮುಂದುವರಿಯಲಿದೆ.
ಈ ಹೆಚ್ಚುವರಿ ಘೋಷಣೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವವರು ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಅಥವಾ ತಂದೆ-ತಾಯಿ, ಅಜ್ಜ-ಅಜ್ಜಿಯ ಹೆಸರು ಇದೆಯೇ ಎಂಬ ಮಾಹಿತಿ ನೀಡಬೇಕಾಗಿತ್ತು. ಹೆಸರು ಇದ್ದಲ್ಲಿ ಮತಗಟ್ಟೆ ಮತ್ತು ಮತದಾರರ ಪಟ್ಟಿಯ ಕ್ರಮಸಂಖ್ಯೆಯಂತಹ ವಿವರಗಳನ್ನು ನೀಡುವ ಅವಕಾಶವನ್ನೂ ಕಲ್ಪಿಸಲಾಗಿತ್ತು.
ಆದರೆ ಈ ಹೆಚ್ಚುವರಿ ಘೋಷಣೆಯನ್ನು ಆನ್‌ಲೈನ್ ಫಾರ್ಮ್-6ಗೆ ಸೇರಿಸಿರುವ ಕ್ರಮ ವಿವಾದಕ್ಕೆ ಕಾರಣವಾಗಿತ್ತು. ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿಗಳು ಪ್ರಕಟವಾಗಿದ್ದವು. ಶಾಸನಬದ್ಧವಾಗಿ ನಿಗದಿಪಡಿಸಲಾದ ಫಾರ್ಮ್‌ನಲ್ಲಿ ಬದಲಾವಣೆ ಮಾಡಲು ನಿಯಮಾನುಸಾರ ಪ್ರಕ್ರಿಯೆ ಅನುಸರಿಸಬೇಕು ಎಂಬುದು ಆಕ್ಷೇಪದ ಪ್ರಮುಖ ಅಂಶವಾಗಿತ್ತು.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ ಜೋಶಿ ಸೆ.26ರಂದು ನಡೆಸಿದ ಪೂರ್ಣ ಆಯೋಗದ ಸಭೆಯ ಬಳಿಕ, ಎಸ್‌ಐಆರ್ ಅವಧಿಗೆ ಸಂಬಂಧಿಸಿದ ಹೆಚ್ಚುವರಿ ಘೋಷಣೆ ಮತ್ತು ಎಸ್‌ಐಆರ್ ನಡೆಯದ ಅವಧಿಯಲ್ಲಿ ಬಳಸಬೇಕಾದ ಶಾಸನಬದ್ಧ ನಮೂನೆಗಳ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು.
ಚುನಾವಣಾ ಆಯೋಗದ ಪ್ರಕಾರ, ಮೂಲ ಫಾರ್ಮ್-6 ಅನ್ನು ಬದಲಾಯಿಸಿರಲಿಲ್ಲ. ಎಸ್‌ಐಆರ್ ಸಂದರ್ಭದಲ್ಲಿ ಮಾತ್ರ ಪ್ರತ್ಯೇಕವಾಗಿ ಹೆಚ್ಚುವರಿ ಘೋಷಣೆಯನ್ನು ಕೇಳಲಾಗಿತ್ತು. ಎಸ್‌ಐಆರ್ ಇಲ್ಲದ ಪ್ರದೇಶಗಳಲ್ಲಿ ಆ ಹೆಚ್ಚುವರಿ ಮಾಹಿತಿ ಅಗತ್ಯವಿಲ್ಲ ಎಂದು ಆಯೋಗದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಫಾರ್ಮ್-6 ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅರ್ಹ ನಾಗರಿಕರು ಸಲ್ಲಿಸುವ ಶಾಸನಬದ್ಧ ಅರ್ಜಿಯಾಗಿದೆ. ಹೀಗಾಗಿ ಎಸ್‌ಐಆರ್ ಪೂರ್ಣಗೊಂಡ ಪ್ರದೇಶಗಳಲ್ಲಿ ಹೊಸ ಮತದಾರರು ಇನ್ನು ಸಾಮಾನ್ಯ ಫಾರ್ಮ್-6 ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ.