LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

‘ಪ್ರಜಾಪ್ರಭುತ್ವ ಉಳಿಸಿ’ ರ‍್ಯಾಲಿ: ಅ.6ರಂದು ಚುನಾವಣಾ ಆಯೋಗದತ್ತ ವಿಪಕ್ಷ ಸಂಸದರ ನಡೆ

ಹೊಸದಿಲ್ಲಿ, ಸೆ. 30 : ಎಸ್‌ಐಆರ್‌ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ವಿರುದ್ಧ ದೇಶವ್ಯಾಪಿ ಹೋರಾಟ ತೀವ್ರಗೊಳಿಸಲು ‘ಇಂಡಿಯಾ’ ಮೈತ್ರಿಕೂಟ ನಿರ್ಧರಿಸಿದ್ದು, ಅ.2ರಿಂದ 8ರವರೆಗೆ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆ ನಡೆಸಲು ತೀರ್ಮಾನಿಸಿದೆ. ಅ.6ರಂದು ವಿರೋಧ ಪಕ್ಷಗಳ ಎಲ್ಲ ಸಂಸದರು ಚುನಾವಣಾ ಆಯೋಗದ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ ಹಲವು ಪ್ರಮುಖ ನಾಯಕರು ಬುಧವಾರ ಸಭೆ ನಡೆಸಿ ಜಂಟಿ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಿದರು.

ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಅ.2ರಿಂದ 8ರವರೆಗೆ ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು. ಯುವಕರು ಹಾಗೂ ವಿವಿಧ ಸಂಘಟನೆಗಳನ್ನೂ ಹೋರಾಟದಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಅ.6ರಂದು ವಿರೋಧ ಪಕ್ಷಗಳ ಸಂಸದರು ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಲಿದ್ದಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ಸಮಯ ಕೋರಿ, ಚುನಾವಣಾ ಪ್ರಕ್ರಿಯೆ ಮತ್ತು ಸಾಂವಿಧಾನಿಕ ವಿಷಯಗಳ ಕುರಿತು ಮನವಿ ಸಲ್ಲಿಸಲಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಐದು ಬೃಹತ್ ರ‍್ಯಾಲಿಗಳನ್ನು ಆಯೋಜಿಸಲು ಮೈತ್ರಿಕೂಟ ನಿರ್ಧರಿಸಿದೆ. ನ.1ರಂದು ದಿಲ್ಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿ, ‘ಮತ ಕಳ್ಳತನ’ ಆರೋಪ ಸೇರಿದಂತೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳನ್ನು ಜನರ ಮುಂದಿಡಲಾಗುವುದು ಎಂದು ಖರ್ಗೆ ಹೇಳಿದರು. ಎಸ್‌ಐಆರ್‌ ಹಾಗೂ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟಗೆ ಮನವಿ ಮಾಡುವುದಾಗಿಯೂ ಅವರು ತಿಳಿಸಿದರು.

ಇವಿಎಂ ಬದಲು ಮತಪತ್ರಕ್ಕೆ ಒತ್ತಾಯ

ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತಪತ್ರಗಳನ್ನು ಬಳಸಬೇಕು ಎಂಬ ಬೇಡಿಕೆಗೂ ಸಭೆಯಲ್ಲಿ ಭಾಗವಹಿಸಿದ ನಾಯಕರು ಒಮ್ಮತ ವ್ಯಕ್ತಪಡಿಸಿದ್ದಾರೆ ಎಂದು ಖರ್ಗೆ ತಿಳಿಸಿದರು. ಎಲ್ಲ ಚುನಾವಣೆಗಳನ್ನು ಮತಪತ್ರಗಳ ಮೂಲಕ ನಡೆಸಬೇಕೆಂಬ ವಿಷಯದಲ್ಲಿ ಸಭೆಯಲ್ಲಿ ಶೇ.100ರಷ್ಟು ಒಮ್ಮತವಿತ್ತು ಎಂದು ಅವರು ಹೇಳಿದರು.

ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆ ಹಾಗೂ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೆನ್ ಸೇರಿದಂತೆ ಕೆಲವು ನಾಯಕರು ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ವಿಷಯದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಲು ಮೈತ್ರಿಕೂಟದ ಪಕ್ಷಗಳು ನಿರ್ಧರಿಸಿವೆ ಎಂದು ಖರ್ಗೆ ಹೇಳಿದರು.

ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. “ಭಾರತದ ಪ್ರಜಾಪ್ರಭುತ್ವ ಯಾವುದೇ ವ್ಯಕ್ತಿಗಿಂತ ದೊಡ್ಡದು” ಎಂದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗಾಗಿ ವಿರೋಧ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಲಿವೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಕೂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಎಸ್‌ಐಆರ್‌ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಚುನಾವಣಾ ಆಯೋಗದ ಕ್ರಮಗಳ ವಿರುದ್ಧ ಹೋರಾಟವನ್ನು ದೇಶದಾದ್ಯಂತ ಕೊಂಡೊಯ್ಯುವುದಾಗಿ ವಿಪಕ್ಷ ನಾಯಕರು ಘೋಷಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST