ಹೊಸದಿಲ್ಲಿ, ಸೆ. 30 : ಕೇಂದ್ರ ಸರ್ಕಾರ 2027–28ನೇ ಮಾರುಕಟ್ಟೆ ವರ್ಷಕ್ಕೆ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ ₹25 ಹೆಚ್ಚಿಸಿದ್ದು, ಹೊಸ ದರವನ್ನು ₹2,610ಕ್ಕೆ ನಿಗದಿಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2026–27ನೇ ಮಾರುಕಟ್ಟೆ ವರ್ಷದಲ್ಲಿ ಗೋಧಿಯ ಎಂಎಸ್‌ಪಿ ಪ್ರತಿ ಕ್ವಿಂಟಲ್‌ಗೆ ₹2,585 ಇತ್ತು. ಇದೀಗ ₹25 ಹೆಚ್ಚಳದೊಂದಿಗೆ ₹2,610ಕ್ಕೆ ಏರಿಕೆಯಾಗಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದಲ್ಲಿ ಎಂಎಸ್‌ಪಿ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಗೋಧಿಯ ಅಂದಾಜು ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಲ್‌ಗೆ ₹1,264 ಆಗಿದ್ದು, 2027–28ನೇ ಸಾಲಿಗೆ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ₹2,610 ಎಂಎಸ್‌ಪಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗೋಧಿ ದೇಶದ ಪ್ರಮುಖ ಹಿಂಗಾರು ಬೆಳೆಯಾಗಿದ್ದು, ಸಾಮಾನ್ಯವಾಗಿ ಅಕ್ಟೋಬರ್ ಅಂತ್ಯದಿಂದ ಬಿತ್ತನೆ ಆರಂಭವಾಗಿ ಏಪ್ರಿಲ್‌ನಿಂದ ಕೊಯ್ಲು ನಡೆಯುತ್ತದೆ. 2027–28ನೇ ಗೋಧಿ ಮಾರುಕಟ್ಟೆ ವರ್ಷ ಏಪ್ರಿಲ್‌ನಿಂದ ಆರಂಭವಾಗಲಿದೆ.
ಬೇಳೆ, ಎಣ್ಣೆಕಾಳುಗಳಿಗೂ ಎಂಎಸ್‌ಪಿ ಹೆಚ್ಚಳ
ಗೋಧಿಯ ಜೊತೆಗೆ ವಿವಿಧ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನೂ ಕೇಂದ್ರ ಸರ್ಕಾರ ಹೆಚ್ಚಿಸಿದೆ.
ಬಾರ್ಲಿಯ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ ₹2,150ರಿಂದ ₹2,286ಕ್ಕೆ ಹೆಚ್ಚಿಸಲಾಗಿದೆ. ಕಡಲೆಯ ಎಂಎಸ್‌ಪಿಯನ್ನು ₹83 ಹೆಚ್ಚಿಸಿ ₹5,958ಕ್ಕೆ ನಿಗದಿಪಡಿಸಲಾಗಿದೆ.
ಮಸೂರ್ ಬೇಳೆಯ ಎಂಎಸ್‌ಪಿಯಲ್ಲಿ ₹390 ಹೆಚ್ಚಳ ಮಾಡಲಾಗಿದ್ದು, ಪ್ರತಿ ಕ್ವಿಂಟಲ್‌ಗೆ ₹7,390ಕ್ಕೆ ಏರಿಸಲಾಗಿದೆ.
ಎಣ್ಣೆಕಾಳುಗಳ ಪೈಕಿ ಸಾಸಿವೆಯ ಎಂಎಸ್‌ಪಿಯನ್ನು ₹413 ಹೆಚ್ಚಿಸಲಾಗಿದ್ದು, ಪ್ರತಿ ಕ್ವಿಂಟಲ್‌ಗೆ ₹6,613ಕ್ಕೆ ನಿಗದಿಪಡಿಸಲಾಗಿದೆ. ವಿವಿಧ ಬೇಳೆಕಾಳು ಮತ್ತು ಎಣ್ಣೆಕಾಳುಗಳ ಎಂಎಸ್‌ಪಿಯಲ್ಲಿ ಗರಿಷ್ಠ ₹675ರವರೆಗೆ ಹೆಚ್ಚಳ ಮಾಡಲಾಗಿದೆ.