ಖಾನಾಪುರ, ಅ. 1 : (ಸಮದರ್ಶಿ ಸುದ್ದಿ) - ಕೃಷಿಗಿಂತ ಹೈನುಗಾರಿಕೆಯಲ್ಲಿ ರೈತರು ಹೆಚ್ಚಿನ ಹಾಗೂ ನಿರಂತರ ಆದಾಯ ಪಡೆಯಲು ಸಾಧ್ಯವಿದೆ. ಕೃಷಿ ಉತ್ಪನ್ನಗಳಿಗೆ ಸ್ಥಿರ ಬೆಂಬಲ ಬೆಲೆ ಇಲ್ಲದ ಪರಿಸ್ಥಿತಿ ಇದ್ದರೂ, ಹಾಲಿಗೆ ಬೇಡಿಕೆ ಮತ್ತು ಉತ್ತಮ ದರ ಇರುವುದರಿಂದ ರೈತರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ರಾಕೇಶ ಸಿ.ಎಂ. ಹೇಳಿದರು.
ತಾಲೂಕಿನ ಕರಿಕಟ್ಟಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕೆಎಂಎಫ್ ಹಾಲಿನ ಡೈರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಾನಾಪುರ ತಾಲೂಕು ಉಪ ವ್ಯವಸ್ಥಾಪಕ ಡಾ. ರಮೇಶ ಕಂಕನವಾಡಿ ಮಾತನಾಡಿ, ಕರಿಕಟ್ಟಿ ಗ್ರಾಮದ ಹಾಲು ಉತ್ಪಾದಕರು ಈ ಹಿಂದೆ ಸುಮಾರು ನಾಲ್ಕು ಕಿ.ಮೀ. ದೂರದ ಕಕ್ಕೇರಿ ಗ್ರಾಮಕ್ಕೆ ತೆರಳಿ ಹಾಲು ನೀಡಬೇಕಾಗಿತ್ತು. ಗ್ರಾಮದ ಮಹಿಳೆಯರ ಒಗ್ಗಟ್ಟು ಹಾಗೂ ಡಿಸಿಸಿ ಬ್ಯಾಂಕ್ ಖಾನಾಪುರ ಶಾಖಾಧಿಕಾರಿ ಸುರೇಶ ಕಾಂಬಳೆ ಅವರ ಪ್ರಯತ್ನದಿಂದ ಇದೀಗ ಸ್ವಗ್ರಾಮದಲ್ಲಿಯೇ ಕೆಎಂಎಫ್ ಹಾಲಿನ ಡೈರಿ ಆರಂಭಿಸಲು ಸಾಧ್ಯವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಕಕ್ಕೇರಿ ಸಿದ್ಧಾರೂಢ ಮಠದ ರಾಮಾನಂದ ಸ್ವಾಮೀಜಿ ಮಾತನಾಡಿ, ಗೋವುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಗ್ರಾಮಸ್ಥರು ಆಕಳು ಮತ್ತು ಎಮ್ಮೆಗಳನ್ನು ಸಾಕುವುದರಿಂದ ಹಾಲಿನ ಉತ್ಪಾದನೆಯ ಜೊತೆಗೆ ಸಗಣಿ ಹಾಗೂ ಗೋಮೂತ್ರವನ್ನು ಕೃಷಿಗೆ ಬಳಸಿಕೊಳ್ಳಬಹುದು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಿ ಉತ್ತಮ ಫಸಲು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕಕ್ಕೇರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಚಿನ್ ಹಾಲಪ್ಪನವರ ಮಾತನಾಡಿ, ರೈತರಿಗೆ ಹೈನುಗಾರಿಕೆ, ಕೃಷಿ ಚಟುವಟಿಕೆ, ಟ್ರ್ಯಾಕ್ಟರ್ ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯಗಳಿವೆ. ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಮಾತನಾಡಿ, ‘ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ’ ಎಂಬಂತೆ ಗ್ರಾಮದ ಪ್ರತಿ ಕುಟುಂಬವೂ ಎರಡು ಆಕಳು ಅಥವಾ ಎಮ್ಮೆಗಳನ್ನು ಸಾಕಿದರೂ ಪ್ರತಿದಿನ ಸುಮಾರು ಒಂದು ಸಾವಿರ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯ ಗ್ರಾಮಕ್ಕೆ ಬರಲಿದೆ. ನೂತನ ಹಾಲಿನ ಡೈರಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸುರೇಶ ಕಾಂಬಳೆ ವಹಿಸಿದ್ದರು. ಕೆಎಂಎಫ್ ವಿಸ್ತರಣಾಧಿಕಾರಿ ಆಕಾಶ ಕಾಂಬಳೆ, ಸಂಘದ ಅಧ್ಯಕ್ಷೆ ಪ್ರೀತಿ ಕಾಂಬಳೆ, ಉಪಾಧ್ಯಕ್ಷೆ ರುಕ್ಕವ್ವ ವಡ್ಡರ, ಕಾರ್ಯದರ್ಶಿ ನಮೃತಾ ಕೊಟೂರ, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಕೃಷ್ಣ ಪರೀಟ, ಜಿಲ್ಲಾ ಭೀಮ್ ಆರ್ಮಿ ಕಾರ್ಯದರ್ಶಿ ಅರ್ಜುನ ಮಂಜಲಕರ, ಕಾಡಪ್ಪ ಚೌವ್ಹಾಣ, ಗಣೇಶ ಬಸನಾಯಕ, ನಾಗಪ್ಪ ತಳವಾರ, ಸಂತೋಷ ಕುಕಡೊಳ್ಳಿ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.