ಬೆಂಗಳೂರು, ನ. 6: ದೇಶದಲ್ಲಿ ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್ ಬೆರೆಸುವ ನೀತಿ ಜಾರಿಯಲ್ಲಿರುವಾಗಲೇ ಕರ್ನಾಟಕದ ವಿವಿಧೆಡೆ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇ.31.2ರವರೆಗೂ ಎಥೆನಾಲ್ ಅಂಶ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡುತ್ತಿರುವ ತೈಲ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ ಆಗ್ರಹಿಸಿದೆ.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಹಾಗೂ ತುಮಕೂರು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬೆಂಗಳೂರಿನ ರಾಷ್ಟ್ರೀಯ ಮಾನ್ಯತೆ ಪಡೆದ ಶ್ರೀರಾಮ್ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಹಲವು ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಅಂಶ ಕಂಡುಬಂದಿದೆ ಎಂದು ಸಚಿವ ರಿಜ್ವಾನ್ ಅರ್ಷದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಕಂಪೆನಿಯ ಪೆಟ್ರೋಲ್‌ನಲ್ಲಿ ಎಷ್ಟು?: ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮಾದರಿಯಲ್ಲಿ ಗರಿಷ್ಠ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂನ ಮಾದರಿಯಲ್ಲಿ ಶೇ.30.5ರಷ್ಟು ಎಥೆನಾಲ್ ಪತ್ತೆಯಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂನ ಮತ್ತೊಂದು ಮಾದರಿಯಲ್ಲಿ ಶೇ.27, ಭಾರತ್ ಪೆಟ್ರೋಲಿಯಂನ ಸ್ಪೀಡ್ ಪೆಟ್ರೋಲ್‌ನಲ್ಲಿ ಶೇ.26.5, ನಯಾರಾ ಪೆಟ್ರೋಲ್‌ನಲ್ಲಿ ಶೇ.26.1 ಹಾಗೂ ಶೆಲ್ ಪೆಟ್ರೋಲ್‌ನಲ್ಲಿ ಶೇ.25.5ರಷ್ಟು ಎಥೆನಾಲ್ ಅಂಶ ದಾಖಲಾಗಿದೆ.
ಇತರ ಮಾದರಿಗಳಲ್ಲಿಯೂ ಶೇ.20.6ರಿಂದ ಶೇ.24.2ರವರೆಗೆ ಎಥೆನಾಲ್ ಅಂಶ ಕಂಡುಬಂದಿದೆ. ಕೆಲವು ಮಾದರಿಗಳಲ್ಲಿ ಮಾತ್ರ ಶೇ.20ಕ್ಕಿಂತ ಕಡಿಮೆ ಪ್ರಮಾಣ ದಾಖಲಾಗಿದೆ.
ಪರೀಕ್ಷಾ ವರದಿಯಲ್ಲಿ ಮಾಹಿತಿ ಮರೆಮಾಚಿದ ಆರೋಪ: ಆರಂಭದಲ್ಲಿ ಪೆಟ್ರೋಲ್ ಮಾದರಿಗಳನ್ನು ತೈಲ ಕಂಪೆನಿಗಳ ಆಂತರಿಕ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಆದರೆ ಅವುಗಳ ವರದಿಗಳಲ್ಲಿ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಿರಲಿಲ್ಲ. ಇದು ತೈಲ ಕಂಪೆನಿಗಳ ಪಾರದರ್ಶಕತೆಯ ಬಗ್ಗೆ ಗಂಭೀರ ಅನುಮಾನ ಮೂಡಿಸಿದೆ ಎಂದು ರಾಜ್ಯ ಸರಕಾರ ಆರೋಪಿಸಿದೆ.
ವಾಹನಗಳಿಗೆ ಹಾನಿಯಾಗುವ ಆತಂಕ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ ಹಾಗೂ ಇಂಧನ ಪಂಪ್, ಫಿಲ್ಟರ್, ಇಂಜೆಕ್ಟರ್ ಮತ್ತು ಸೀಲ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಸರಕಾರ ಕಳವಳ ವ್ಯಕ್ತಪಡಿಸಿದೆ.
ದೇಶದಲ್ಲಿರುವ ಸುಮಾರು 35 ಕೋಟಿ ವಾಹನಗಳಲ್ಲಿ ಬಹುಪಾಲು ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ವಿನ್ಯಾಸಗೊಳಿಸಲಾಗಿಲ್ಲ. 2023ರ ಏಪ್ರಿಲ್ ನಂತರ ಮಾರಾಟವಾದ ವಾಹನಗಳೂ ಸಾಮಾನ್ಯವಾಗಿ ಶೇ.20ರವರೆಗಿನ ಮಿಶ್ರಣಕ್ಕೆ ಪ್ರಮಾಣೀಕರಿಸಲ್ಪಟ್ಟಿವೆ ಎಂದು ಸರಕಾರ ಹೇಳಿದೆ.
ಪೆಟ್ರೋಲ್ ಬಂಕ್‌ಗಳಲ್ಲಿನ ಇಂಧನ ವಿತರಣಾ ಉಪಕರಣಗಳ ಸಾಮರ್ಥ್ಯದ ಬಗ್ಗೆಯೂ ಪ್ರಶ್ನೆ ಎತ್ತಿರುವ ರಾಜ್ಯ ಸರಕಾರ, ಗ್ರಾಹಕರ ಹಿತದೃಷ್ಟಿಯಿಂದ ತೈಲ ಕಂಪೆನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.