ಹೊಸದಿಲ್ಲಿ, ನ. 6: ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ ಶುಕ್ರವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ. ನ್ಯಾಯಾಂಗದ ಸ್ವಾತಂತ್ರ್ಯವು ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗುವ ವಿಷಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಮತ್ತು ವಿಪುಲ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠವು, ಸಂವಿಧಾನವೇ ಸರ್ವೋಚ್ಚವಾಗಿದ್ದು, ಯಾವುದೇ ವ್ಯಕ್ತಿ ಅಥವಾ ರಾಜಕೀಯ ಸಂಘಟನೆ ಸಂವಿಧಾನಕ್ಕಿಂತ ಮೇಲಲ್ಲ ಎಂದು ಹೇಳಿದೆ.
ನ್ಯಾಯಾಲಯದ ತೀರ್ಪುಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ನ್ಯಾಯಾಂಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ಅಥವಾ ನ್ಯಾಯಾಲಯಕ್ಕೆ ಬೆದರಿಕೆ ಹಾಕಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣಾ ಕವಚವಾಗಿ ಬಳಸಿಕೊಳ್ಳುವಂತಿಲ್ಲ. ಎಷ್ಟೇ ಪ್ರಭಾವಶಾಲಿ ವ್ಯಕ್ತಿಯಾಗಿದ್ದರೂ ನ್ಯಾಯಾಲಯದ ಅಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೀಠ ಎಚ್ಚರಿಸಿದೆ.
ನ್ಯಾಯಾಲಯದ ಅಧಿಕಾರಕ್ಕೆ ಯಾವುದೇ ರಾಜಕೀಯ ಪಕ್ಷದ ಅನುಮೋದನೆ ಅಗತ್ಯವಿಲ್ಲ. ನ್ಯಾಯಾಂಗದ ಅಧಿಕಾರವು ಕಾನೂನಿನ ಆಳ್ವಿಕೆಯ ಮೇಲೆ ನಿಂತಿದ್ದು, ನ್ಯಾಯದಾನ ಪ್ರಕ್ರಿಯೆಯಲ್ಲಿ ಕಾನೂನು ತನ್ನದೇ ಆದ ಹಾದಿಯಲ್ಲಿ ಸಾಗಬೇಕು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 12ರ ಪೋಸ್ಟ್ ವಿವಾದ: ಕೇರಳ ಕಾಂಗ್ರೆಸ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಕ್ಟೋಬರ್ 12ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಗುರಿಯಾಗಿಸಿಕೊಂಡು ಪೋಸ್ಟ್ ಪ್ರಕಟಿಸಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ಪೋಸ್ಟ್ ಅಳಿಸಲಾಗಿತ್ತು. ಘಟನೆಗೆ ಕಾರಣರಾದ ವ್ಯಕ್ತಿಯನ್ನು ಪಕ್ಷದ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಈ ಪ್ರಕರಣದಲ್ಲಿ ಕ್ರಿಮಿನಲ್ ಅಥವಾ ಸಿವಿಲ್ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ನಿಯಮಗಳು ಅನ್ವಯಿಸುತ್ತವೆಯೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ ಹಿರಿಯ ವಕೀಲರೊಬ್ಬರನ್ನು ನ್ಯಾಯಾಲಯದ ಸಹಾಯಕರಾಗಿ ನೇಮಿಸಿದೆ. ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವನ್ನೂ ಕೋರಿದೆ.
ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಘನತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನ್ಯಾಯದಾನ ಪ್ರಕ್ರಿಯೆಗೆ ಅಡ್ಡಿಪಡಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.