ಮುಂಬಯಿ, ನ. 6: ಬ್ಯಾಂಕುಗಳಿಗೆ ₹12,668.06 ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ವಿಡಿಯೋಕಾನ್ ಇಂಡಸ್ಟ್ರೀಸ್ನ ಮಾಜಿ ಪ್ರವರ್ತಕ ವೇಣುಗೋಪಾಲ ನಂದಲಾಲ ಧೂತ್ ಅವರನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯ ಮುಂಬಯಿ ಪೀಠ ದಿವಾಳಿ ಎಂದು ಘೋಷಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಗುರುವಾರ ಈ ಆದೇಶ ಹೊರಡಿಸಲಾಗಿದೆ.
ನ್ಯಾಯಾಂಗ ಸದಸ್ಯ ವಿನಯ ಗೋಯೆಲ್ ಹಾಗೂ ತಾಂತ್ರಿಕ ಸದಸ್ಯ ಚರಣಜೀತ ಸಿಂಗ್ ಗುಲಾಟಿ ಅವರನ್ನೊಳಗೊಂಡ ಪೀಠವು 2016ರ ದಿವಾಳಿತನ ಸಂಹಿತೆಯ ಸೆಕ್ಷನ್ 126ರ ಅಡಿಯಲ್ಲಿ ಆದೇಶ ನೀಡಿದೆ. ಧೂತ್ ಅವರ ಆಸ್ತಿಗಳ ನಿರ್ವಹಣೆಗಾಗಿ ಆಶಿಶ ನಾರಾಯಣ ಅವರನ್ನು ದಿವಾಳಿತನ ಟ್ರಸ್ಟಿಯಾಗಿ ನೇಮಿಸಲಾಗಿದೆ.
ವಿಡಿಯೋಕಾನ್ ಇಂಡಸ್ಟ್ರೀಸ್ ಹಾಗೂ ವಿಡಿಯೋಕಾನ್ ಟೆಲಿಕಮ್ಯುನಿಕೇಷನ್ಸ್ ಕಂಪೆನಿಗಳಿಗೆ ಬ್ಯಾಂಕುಗಳು ನೀಡಿದ್ದ ಸಾಲಗಳಿಗೆ ಧೂತ್ ವೈಯಕ್ತಿಕ ಖಾತರಿ ನೀಡಿದ್ದರು. ಕಂಪೆನಿಗಳು ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ 2018ರ ಫೆಬ್ರವರಿಯಲ್ಲಿ ಬ್ಯಾಂಕುಗಳು ಅವರ ವೈಯಕ್ತಿಕ ಖಾತರಿಗಳನ್ನು ಜಾರಿಗೊಳಿಸಿದ್ದವು.
ದಿವಾಳಿತನ ಪ್ರಕ್ರಿಯೆಯಿಂದ ಹೊರಬರಲು ಧೂತ್ ₹600 ಕೋಟಿ ಮರುಪಾವತಿಸುವ ಪ್ರಸ್ತಾವನೆ ಸಲ್ಲಿಸಿದ್ದರು. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಉದ್ದೇಶಿತ ರಿಯಲ್ ಎಸ್ಟೇಟ್ ಯೋಜನೆಯ ಮೂಲಕ 36 ತಿಂಗಳಲ್ಲಿ ಹಣ ಪಾವತಿಸುವುದಾಗಿ ತಿಳಿಸಿದ್ದರು. ಆದರೆ ಹಣಕಾಸಿನ ಲಭ್ಯತೆಗೆ ವಿಶ್ವಾಸಾರ್ಹ ದಾಖಲೆಗಳಿಲ್ಲದ ಕಾರಣ ಸಾಲಗಾರರು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು. ಜುಲೈ 17ರಂದು ನ್ಯಾಯಮಂಡಳಿಯೂ ಈ ಯೋಜನೆಯನ್ನು ತಿರಸ್ಕರಿಸಿತ್ತು.
ಸೆಪ್ಟೆಂಬರ್ 30ರ ಅಂತ್ಯಕ್ಕೆ ಬಡ್ಡಿ ಮತ್ತು ದಂಡ ಸೇರಿದಂತೆ ₹12,668.06 ಕೋಟಿ ಬಾಕಿ ಇರುವುದಾಗಿ ಸ್ಟೇಟ್ ಬ್ಯಾಂಕ್ ತಿಳಿಸಿತ್ತು. ಧೂತ್ ಅವರು ತಮ್ಮ ಆರ್ಥಿಕ ವಿವರಗಳನ್ನು 7 ದಿನಗಳೊಳಗೆ ಟ್ರಸ್ಟಿಗೆ ಸಲ್ಲಿಸಬೇಕು. ಟ್ರಸ್ಟಿಯು 90 ದಿನಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸಬೇಕು ಎಂದು ನ್ಯಾಯಮಂಡಳಿ ನಿರ್ದೇಶಿಸಿದೆ.