ಚಂಡೀಗಢ, ನ. 6: ಪಂಜಾಬ್‌ನ ಪಟಿಯಾಲಾ ಜಿಲ್ಲೆಯ ಸರಾಯ್ ಬಂಜಾರ ರೈಲು ನಿಲ್ದಾಣದ ಸಮೀಪ ಶುಕ್ರವಾರ ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ನಾಲ್ಕನೇ ಬೋಗಿಗೆ ಭಾಗಶಃ ಹಾನಿಯಾಗಿದೆ. ರೈಲಿನಲ್ಲಿದ್ದ 1,500ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಭಾರಿ ದುರಂತವೊಂದು ತಪ್ಪಿದೆ.
ಅಮೃತಸರದಿಂದ ಪಶ್ಚಿಮ ಬಂಗಾಳದ ಹೊಸ ಜಲ್ಪೈಗುರಿಗೆ ತೆರಳುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲು ರಾಜಪುರ-ಸಿರ್ಹಿಂದ್ ರೈಲು ಮಾರ್ಗದ ಸರಾಯ್ ಬಂಜಾರ ನಿಲ್ದಾಣದ ಬಳಿ ಸಂಚರಿಸುತ್ತಿದ್ದಾಗ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ರೈಲನ್ನು ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು.
ಬೆಂಕಿ ಕಾಣಿಸಿಕೊಂಡ ಬೋಗಿಗಳನ್ನು ಉಳಿದ ರೈಲಿನಿಂದ ಬೇರ್ಪಡಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಗಾಳಿಯ ರಭಸಕ್ಕೆ ವ್ಯಾಪಿಸಿದ ಬೆಂಕಿ: ಆರಂಭದಲ್ಲಿ ಒಂದು ಬೋಗಿಯಲ್ಲಿ ಕಾಣಿಸಿಕೊಂಡ ಬೆಂಕಿ, ಬಲವಾದ ಗಾಳಿಯಿಂದಾಗಿ ಇತರ ಬೋಗಿಗಳಿಗೂ ವೇಗವಾಗಿ ವ್ಯಾಪಿಸಿತು. ಮೂರು ಸಾಮಾನ್ಯ ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ನಾಲ್ಕನೇ ಬೋಗಿಗೆ ಭಾಗಶಃ ಹಾನಿಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಅಂಬಾಲಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನೋದ ಕುಮಾರ ಭಾಟಿಯಾ, ಆರಂಭದಲ್ಲಿ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಗಾಳಿಯ ವೇಗ ಹೆಚ್ಚಿದ್ದರಿಂದ ಒಟ್ಟು ನಾಲ್ಕು ಬೋಗಿಗಳಿಗೆ ವ್ಯಾಪಿಸಿತು ಎಂದು ತಿಳಿಸಿದರು.
ರೈಲಿನ ಬೋಗಿಗಳಿಂದ ದಟ್ಟ ಹೊಗೆ ಆಕಾಶಕ್ಕೆ ಏರುತ್ತಿರುವುದನ್ನು ಕಂಡ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದರು. ಪ್ರಯಾಣಿಕರು ಕೂಡಲೇ ಬೋಗಿಗಳಿಂದ ಹೊರಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದರು.
ವಿದ್ಯುತ್ ಸಂಪರ್ಕ ಸ್ಥಗಿತ: ಬೆಂಕಿ ಕಾಣಿಸಿಕೊಂಡ ತಕ್ಷಣ ರೈಲ್ವೆ ಮಾರ್ಗದ ಮೇಲಿನ ಎರಡೂ ವಿದ್ಯುತ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಯಿತು. ರೈಲಿನ ಗಾರ್ಡ್ ಹಾಗೂ ಲೋಕೊ ಪೈಲಟ್ ಬೆಂಕಿ ಹೊತ್ತಿಕೊಂಡ ಬೋಗಿಗಳನ್ನು ಉಳಿದ ಬೋಗಿಗಳಿಂದ ಬೇರ್ಪಡಿಸಿದರು.
ಗಾರ್ಡ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ ಬಳಿಕ ಇತರ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ರೈಲುಗಳ ಸಂಚಾರವನ್ನೂ ನಿಯಂತ್ರಿಸಲಾಯಿತು.
ಪ್ರಯಾಣಿಕರಿಗೆ ಪರ್ಯಾಯ ರೈಲು ವ್ಯವಸ್ಥೆ: ಉತ್ತರ ರೈಲ್ವೆಯ ಅಂಬಾಲಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಯಶಾಂಜಿತ ಸಿಂಗ್ ಮಾತನಾಡಿ, ಮೂರು ಸಾಮಾನ್ಯ ಬೋಗಿಗಳಿಗೆ ಹೆಚ್ಚಿನ ಹಾನಿಯಾಗಿದ್ದು, ನಾಲ್ಕನೇ ಬೋಗಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದರು.
ಪ್ರಯಾಣಿಕರು ತಮ್ಮ ಗಮ್ಯಸ್ಥಾನ ತಲುಪಲು ಮತ್ತೊಂದು ರೈಲಿನ ಮೂಲಕ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.