ಮುಂಬಯಿ, ನ. 6: ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ನಿವಾಸ, ಬಾಂಬೆ ಹೈಕೋರ್ಟ, ಬಾಂಬೆ ಷೇರುಪೇಟೆ ಹಾಗೂ ವರ್ಲಿ ರೇಸ್ಕೋರ್ಸ್ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬಂದಿದ್ದ ಬೆದರಿಕೆ ಹುಸಿಯೆಂದು ತಿಳಿದುಬಂದಿದೆ. ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಶೋಧ ನಡೆಸಿದರೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಬಾಂಬೆ ಹೈಕೋರ್ಟಗೆ ಬಂದಿದ್ದ ಇ-ಮೇಲ್ ಸಂದೇಶದಲ್ಲಿ ನಗರದ ನಾಲ್ಕು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಸಲಾಗಿತ್ತು. ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಮುಂಬಯಿ ಪೊಲೀಸರು ತಕ್ಷಣ ಭದ್ರತೆಯನ್ನು ಬಿಗಿಗೊಳಿಸಿ, ಸಂಬಂಧಪಟ್ಟ ಸ್ಥಳಗಳಲ್ಲಿ ತಪಾಸಣೆ ನಡೆಸಿದರು.
ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಸೇರಿದಂತೆ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಯಾವುದೇ ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಬೆದರಿಕೆ ಹುಸಿಯೆಂದು ತಿಳಿದುಬಂದಿದೆ. ಆದರೂ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಮಿತಾಭ್ ಹೆಸರು ಎರಡನೇ ಬಾರಿ ಪ್ರಸ್ತಾಪ: ಅಕ್ಟೋಬರ್ 22ರಂದು ಮುಂಬಯಿಯ ಶಾಲೆಯೊಂದಕ್ಕೆ ಬಂದಿದ್ದ ಬೆದರಿಕೆ ಸಂದೇಶದಲ್ಲಿಯೂ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಅವರಿಗೆ ನೇರವಾಗಿ ಬೆದರಿಕೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.
ಇತ್ತೀಚಿನ ಭದ್ರತಾ ಆತಂಕಗಳ ನಡುವೆ ಅಮಿತಾಭ್ ಬಚ್ಚನ್ ತಮ್ಮ ‘ಜಲ್ಸಾ’ ನಿವಾಸದ ಹೊರಗೆ ಅಭಿಮಾನಿಗಳಿಗೆ ರಕ್ಷಣಾತ್ಮಕ ಗಾಜಿನ ಪರದೆಯ ಹಿಂದೆ ನಿಂತು ದರ್ಶನ ನೀಡಿದ್ದರು. ಪುತ್ರ ಅಭಿಷೇಕ್ ಬಚ್ಚನ್ ಕೂಡ ಅವರೊಂದಿಗಿದ್ದರು. ಬೆದರಿಕೆ ಹುಸಿಯೆಂದು ದೃಢಪಟ್ಟಿದ್ದರೂ ಇಂತಹ ಸಂದೇಶಗಳ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.