LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

57 ಲಕ್ಷ ರೈತರಿಗೆ ದೀಪಾವಳಿ ಕೊಡುಗೆ: ಬರ ಪರಿಹಾರ ₹5,000ಕ್ಕೆ ಹೆಚ್ಚಳ

ಬೆಂಗಳೂರು, ನ. 5: ರಾಜ್ಯದಲ್ಲಿ ತೀವ್ರ ಬರಗಾಲದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ದೀಪಾವಳಿ ಸಂದರ್ಭದಲ್ಲಿ ಸರ್ಕಾರ ಪರಿಹಾರದ ನೆರವು ಘೋಷಿಸಿದ್ದು, ಪ್ರತಿ ಅರ್ಹ ರೈತನಿಗೆ ನೀಡುವ ಮಧ್ಯಂತರ ಇನ್‌ಪುಟ್ ಸಬ್ಸಿಡಿಯನ್ನು ₹2,500ರಿಂದ ₹5,000ಕ್ಕೆ ಹೆಚ್ಚಿಸಿದೆ. ಮೊದಲ ಕಂತಿನ ₹2,500 ಬಿಡುಗಡೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಚಾಲನೆ ನೀಡಿದರು.

ಮೊದಲ ಹಂತದಲ್ಲಿ ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ₹17.43 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, ಉಳಿದ ₹2,500 ಅನ್ನು ಮುಂದಿನ 15ರಿಂದ 20 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.

ದಸರಾ ಮುಗಿದು ದೀಪಾವಳಿ ಬಂದರೂ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಬದುಕಿಗೆ ಸ್ವಲ್ಪಮಟ್ಟಿಗಾದರೂ ನೆರವಾಗಬೇಕೆಂಬ ಉದ್ದೇಶದಿಂದ ಸರ್ಕಾರ ತನ್ನ ಸ್ವಂತ ನಿಧಿಯಿಂದ ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಿದೆ. ಈ ನೆರವಿನಿಂದ ರೈತರ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿಲ್ಲವಾದರೂ ತಕ್ಷಣದ ಆರ್ಥಿಕ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

15 ಜಿಲ್ಲೆಗಳಿಗೆ ಶೀಘ್ರ ಪರಿಹಾರ

ಉತ್ತರ ಕನ್ನಡ, ಕೋಲಾರ, ಕೊಪ್ಪಳ, ಚಾಮರಾಜನಗರ, ಧಾರವಾಡ, ಬಳ್ಳಾರಿ, ಬೀದರ್, ಬೆಂಗಳೂರು ನಗರ, ಹಾವೇರಿ, ಬೆಂಗಳೂರು ದಕ್ಷಿಣ, ದಾವಣಗೆರೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಹಾಗೂ ವಿಜಯನಗರ ಸೇರಿದಂತೆ 15 ಜಿಲ್ಲೆಗಳ ರೈತರಿಗೆ ಪರಿಹಾರ ವಿತರಿಸಲು ಪಾವತಿ ಕಡತಗಳ ಸಿದ್ಧತೆ ನಡೆಯುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಅರ್ಹ ರೈತರಿಗೂ ಶೀಘ್ರ ಪರಿಹಾರ ತಲುಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

226 ತಾಲೂಕುಗಳಲ್ಲಿ ಭೀಕರ ಬರ

2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದ ರಾಜ್ಯದ 226 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ 551 ಮಿ.ಮೀ. ಮಳೆಯಾಗಿದ್ದು, ಶೇ.35ರಷ್ಟು ಕೊರತೆ ದಾಖಲಾಗಿದೆ.

ಉತ್ತರ ಒಳನಾಡಿನಲ್ಲಿ ಶೇ.42, ದಕ್ಷಿಣ ಒಳನಾಡಿನಲ್ಲಿ ಶೇ.41, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಕರ್ನಾಟಕದಲ್ಲಿ ಶೇ.28ರಷ್ಟು ಮಳೆ ಕೊರತೆಯಾಗಿದೆ. ಮಳೆಯ ಅಭಾವದಿಂದ ರಾಜ್ಯದ ಬಹುತೇಕ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 69.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ, 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ. ಇದು ಒಟ್ಟು ಬಿತ್ತನೆ ಪ್ರದೇಶದ ಶೇ.83.26ರಷ್ಟಾಗಿದ್ದು, ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ.

ಕೇಂದ್ರಕ್ಕೆ ₹22,400 ಕೋಟಿ ನೆರವಿನ ಮನವಿ

ಬರ ಪರಿಹಾರಕ್ಕಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಡಿ ₹22,400.58 ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಬೆಳೆಹಾನಿ ಪರಿಹಾರಕ್ಕೆ ₹7,943.55 ಕೋಟಿ, ಕುಡಿಯುವ ನೀರಿನ ವ್ಯವಸ್ಥೆಗೆ ₹1,727 ಕೋಟಿ, ಜಾನುವಾರುಗಳ ರಕ್ಷಣೆಗೆ ₹583.04 ಕೋಟಿ ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಗ್ರಹ ಪರಿಹಾರವಾಗಿ ₹12,146.99 ಕೋಟಿ ಕೋರಲಾಗಿದೆ.

ಕೇಂದ್ರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಪರಿಷ್ಕೃತ ಮಾನದಂಡಗಳು ಹಾಗೂ ಅರ್ಹತಾ ಷರತ್ತುಗಳ ಅನ್ವಯ ರೈತರಿಗೆ ಬಾಕಿ ಇರುವ ಅನುಮೋದಿತ ಪರಿಹಾರವನ್ನು ಒಂದೇ ಕಂತಿನಲ್ಲಿ ವಿತರಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST