ಹೊಸದಿಲ್ಲಿ, ಸೆ. 29 : - ದೇಶದಲ್ಲಿನ ಜನಸಂಖ್ಯಾ ಬದಲಾವಣೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಕೇಂದ್ರ ಗೃಹ ಸಚಿವಾಲಯದ ಉನ್ನತ ಮಟ್ಟದ ಸಮಿತಿ ರಾಜ್ಯ ಸರಕಾರಗಳಿಗೆ 35 ಪ್ರಶ್ನೆಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯವಾದ ಧರ್ಮವಾರು ದತ್ತಾಂಶ ತಮ್ಮ ಬಳಿ ಲಭ್ಯವಿಲ್ಲ ಎಂದು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪ್ರಕಾಶ ಪ್ರಭಾಕರ ನಾವೋಲೆಕರ್ ಅಧ್ಯಕ್ಷತೆಯ ಸಮಿತಿಯನ್ನು ಅಕ್ರಮ ವಲಸೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಜನಸಂಖ್ಯಾ ಬದಲಾವಣೆಗಳನ್ನು ಅಧ್ಯಯನ ಮಾಡಲು ಮೇ 26ರಂದು ಕೇಂದ್ರ ಗೃಹ ಸಚಿವಾಲಯ ರಚಿಸಿದೆ.
ಕಳೆದ 15 ವರ್ಷಗಳ ಜನನ ನೋಂದಣಿ, ಶಾಲಾ ದಾಖಲಾತಿ, ವಾಹನ ನೋಂದಣಿ, ಆಸ್ತಿ ವಹಿವಾಟು ಹಾಗೂ ಪಡಿತರ ಚೀಟಿಗಳಿಗೆ ಸಂಬಂಧಿಸಿದ ಧರ್ಮವಾರು ವಿವರಗಳನ್ನು ಸಮಿತಿ ಕೇಳಿದೆ. ಆದರೆ ಸರಕಾರಿ ಇಲಾಖೆಗಳು ಸಾಮಾನ್ಯವಾಗಿ ಇಂತಹ ಮಾಹಿತಿಯನ್ನು ಧರ್ಮದ ಆಧಾರದಲ್ಲಿ ನಿರ್ವಹಿಸುವುದಿಲ್ಲ. ಹೀಗಾಗಿ ಸಮಿತಿಯ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ ಎಂದು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.
ಐತಿಹಾಸಿಕ ಜನನ ಪ್ರಮಾಣಕ್ಕೆ ಹೊಂದಿಕೆಯಾಗದ ರೀತಿಯಲ್ಲಿ ಶಾಲಾ ದಾಖಲಾತಿ ಹೆಚ್ಚಿರುವ ಜಿಲ್ಲೆಗಳು, ಕಳೆದ 15 ವರ್ಷಗಳಲ್ಲಿ ನಿರ್ಮಾಣವಾದ ಧಾರ್ಮಿಕ ಕಟ್ಟಡಗಳು ಹಾಗೂ ಅವುಗಳ ಜಿಐಎಸ್ ಮ್ಯಾಪಿಂಗ್ ವಿವರಗಳನ್ನೂ ಕೇಳಲಾಗಿದೆ. ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿ ನೋಂದಣಿಯಲ್ಲಿ ಅಸಾಮಾನ್ಯ ಏರಿಕೆ ಕಂಡ ಜಿಲ್ಲೆಗಳ ಮಾಹಿತಿಯನ್ನೂ ಸಮಿತಿ ಕೋರಿದೆ.
ಗಡಿ, ನಗರ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಧಾರ್ಮಿಕ ಜನಸಂಖ್ಯೆಯ ಸಂಯೋಜನೆಯಲ್ಲಿ ಕಂಡುಬಂದ ಬದಲಾವಣೆಗಳು, ಮತಾಂತರಕ್ಕೆ ಸಂಬಂಧಿಸಿದ ವರದಿಗಳು ಹಾಗೂ ಸರಕಾರ ಕೈಗೊಂಡ ಕ್ರಮಗಳ ವಿವರಗಳನ್ನೂ ಕೇಳಲಾಗಿದೆ. ಬುಡಕಟ್ಟು ಪ್ರದೇಶಗಳಲ್ಲಿರುವ ಮದರಸಾಗಳು ಸೇರಿದಂತೆ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮಾಹಿತಿಯೂ ಪ್ರಶ್ನಾವಳಿಯಲ್ಲಿದೆ.
ದಾಖಲೆರಹಿತ ವಲಸಿಗರನ್ನು ಗುರುತಿಸುವುದು, ಬಂಧಿಸುವುದು ಮತ್ತು ಗಡೀಪಾರು ಮಾಡುವ ಕ್ರಮಗಳು, ಕಾರ್ಯನಿರ್ವಹಿಸುತ್ತಿರುವ ಬಂಧನ ಕೇಂದ್ರಗಳು, ನಕಲಿ ದಾಖಲೆಗಳ ಬಳಕೆ ಹಾಗೂ ಅಕ್ರಮ ವಲಸಿಗರಿಗೆ ಸಂಘಟಿತ ಅಪರಾಧ, ಮಾನವ ಕಳ್ಳಸಾಗಣೆ ಅಥವಾ ಮಾದಕವಸ್ತು ಪ್ರಕರಣಗಳೊಂದಿಗೆ ನಂಟಿದೆಯೇ ಎಂಬ ಮಾಹಿತಿಯನ್ನೂ ರಾಜ್ಯಗಳಿಂದ ಕೋರಲಾಗಿದೆ.
2005ರಲ್ಲಿ ಯುಪಿಎ ಸರಕಾರ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನಕ್ಕಾಗಿ ಸಾಚಾರ್ ಸಮಿತಿಯನ್ನು ರಚಿಸಿತ್ತು. ಆಗ ಪ್ರಮುಖ ವಿರೋಧ ಪಕ್ಷವಾಗಿದ್ದ ಬಿಜೆಪಿ ಅದರ ಕೆಲವು ಶಿಫಾರಸುಗಳನ್ನು ವಿರೋಧಿಸಿ, ಅವು ಧರ್ಮಾಧಾರಿತ ಮೀಸಲಾತಿಗೆ ಉತ್ತೇಜನ ನೀಡಬಹುದು ಎಂದು ವಾದಿಸಿತ್ತು.
ಇದೇ ವೇಳೆ, ಮೇ 27ರಂದು ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಸುಪ್ರೀಂ ಕೋರ್ಟ ಎತ್ತಿಹಿಡಿದಿತ್ತು. ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ತೆಗೆದುಹಾಕುವ ಸೀಮಿತ ಉದ್ದೇಶಕ್ಕಾಗಿ ಚುನಾವಣಾ ಆಯೋಗ ಪೌರತ್ವದ ಕುರಿತು ಪರಿಶೀಲನೆ ನಡೆಸಬಹುದಾದರೂ, ಪೌರತ್ವದ ಅಂತಿಮ ನಿರ್ಣಯವನ್ನು ಸಕ್ಷಮ ಪ್ರಾಧಿಕಾರವೇ ಕೈಗೊಳ್ಳಬೇಕು ಎಂದು ಕೋರ್ಟ ಸ್ಪಷ್ಟಪಡಿಸಿತ್ತು.
ಎಸ್‌ಐಆರ್‌ನಲ್ಲಿ ಶಂಕಿತ ವಿದೇಶಿ ಪ್ರಜೆಗಳೆಂಬ ಕಾರಣಕ್ಕೆ ಕೈಬಿಡಲಾದವರ ಕುರಿತ ದತ್ತಾಂಶವನ್ನು ಚುನಾವಣಾ ಆಯೋಗ ಇನ್ನೂ ಸಮಿತಿಗೆ ನೀಡಿಲ್ಲ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಸಮಿತಿಯು ಈಗಾಗಲೇ ಜಮ್ಮು ಪ್ರದೇಶಕ್ಕೆ ಭೇಟಿ ನೀಡಿದ್ದು, ಮುಂದಿನ ಹಂತದಲ್ಲಿ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದೆ ಎಂದು ವರದಿಯಾಗಿದೆ.