LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಕೆಲಸ ಬಿಡ್ತೀನಿ, ಅವರನ್ನು ಬಿಡಲ್ಲ: ಅಧಿಕಾರಿ ಆಕ್ರೋಶ

ಬೆಳಗಾವಿ, ಸೆ. 30 : (ಸಮದರ್ಶಿ ಸುದ್ದಿ) - ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಎಐಎಂಐಎಂ ಸದಸ್ಯ ಶಾಹಿದ್ ಖಾನ್ ಪಠಾಣ ಹಾಗೂ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ್ ನಡುವಿನ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಭೆಯ ಮಧ್ಯಾಹ್ನದ ವಿರಾಮದ ವೇಳೆ ನಿಪ್ಪಾಣಿಕರ್ ಬಹಿರಂಗವಾಗಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಸಭೆಯಲ್ಲಿ ಮಾತನಾಡಿದ ಶಾಹಿದ ಖಾನ್ ಪಠಾಣ, ತಮ್ಮ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಂಟಾಗಿರುವ ಕುರಿತು ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮಾಡಿದ್ದಾಗ ಸಮರ್ಪಕ ಉತ್ತರ ಸಿಗಲಿಲ್ಲ ಎಂದು ಆರೋಪಿಸಿದರು.

“ನಮ್ಮ ವಾರ್ಡನಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗೆ ಕರೆ ಮಾಡಿದ್ದೆ. ಮಳೆಯೇ ಬಂದಿಲ್ಲ, ನೀರು ಎಲ್ಲಿಂದ ಕೊಡಲಿ ಎಂದು ಉತ್ತರಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಪಾಲಿಕೆ ಸದಸ್ಯನಿಗೇ ಈ ರೀತಿ ಬೇಜವಾಬ್ದಾರಿಯಿಂದ ಉತ್ತರಿಸುವುದು ಸರಿಯಲ್ಲ. ಅವರು ಅಸಮರ್ಥ ಅಧಿಕಾರಿ” ಎಂದು ಪಠಾಣ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಆದರೆ, ತಮ್ಮ ಆರೋಪದ ವೇಳೆ ಪಠಾಣ ಯಾವುದೇ ಅಧಿಕಾರಿಯ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಸಭೆಯಲ್ಲಿ ಹಾಜರಿದ್ದ ಲಕ್ಷ್ಮೀ ನಿಪ್ಪಾಣಿಕರ ಆ ಮಾತುಗಳನ್ನು ಆಲಿಸಿದರು. ಮಧ್ಯಾಹ್ನದ ಊಟದ ವಿರಾಮದಲ್ಲಿ ಪರಿಷತ್ ಸಭಾಂಗಣದಿಂದ ಹೊರಬಂದ ಬಳಿಕ ನಿಪ್ಪಾಣಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇನೆ. ಪರಿಸ್ಥಿತಿ ಬಂದರೆ ಕೆಲಸವನ್ನೇ ಬಿಡುತ್ತೇನೆ, ಆದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಅವರು ಏರುಧ್ವನಿಯಲ್ಲಿ ಹೇಳಿದರು.

ಇದೇ ವೇಳೆ ಪಠಾಣ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ನಿಪ್ಪಾಣಿಕರ್, “ಎಲ್ಲರೊಂದಿಗೆ ಮಾತನಾಡಿದಂತೆ ನನ್ನೊಂದಿಗೆ ವರ್ತಿಸಿದರೆ ನಡೆಯುವುದಿಲ್ಲ. ಅವರಿಗೆ ಹಣ ಕೊಡುವವರೆಲ್ಲ ಒಳ್ಳೆಯವರು. ನಾನು ಹಣ ಕೊಡುವುದಿಲ್ಲ ಎಂಬ ಕಾರಣಕ್ಕೆ ನನ್ನ ಬಗ್ಗೆ ಈ ರೀತಿ ಮಾತನಾಡುತ್ತಾರೆ” ಎಂದು ಆರೋಪಿಸಿದರು.

ಅವರ ಧ್ವನಿ ಕೇಳಿ ಸ್ಥಳಕ್ಕೆ ಬಂದ ಪಾಲಿಕೆಯ ಹಿರಿಯ ಸದಸ್ಯರಾದ ರಮೇಶ ಸೊಂಟಕ್ಕಿ, ಡಾ. ದಿನೇಶ ನಾಶಿಪುಡಿ, ಸಿದ್ರಾಯ ಮೇತ್ರಿ ಹಾಗೂ ಮುಜಮ್ಮಿಲ್ ಡೋಣಿ ಅವರ ಎದುರಲ್ಲೂ ನಿಪ್ಪಾಣಿಕರ್ ತಮ್ಮ ಅಸಮಾಧಾನ ಹೊರಹಾಕಿದರು.

“ನನ್ನನ್ನು ಆ ರೀತಿ ಪ್ರಶ್ನಿಸಲು ಅವರ್ಯಾರು? ಒಬ್ಬ ಮಹಿಳಾ ಅಧಿಕಾರಿ ಬಗ್ಗೆ ಈ ರೀತಿ ಮಾತನಾಡುತ್ತಿದ್ದರೂ ನೀವು ಯಾರೂ ನನ್ನ ಪರವಾಗಿ ಮಾತನಾಡಲಿಲ್ಲ. ಏಕೆ ಸುಮ್ಮನಿದ್ದಿರಿ?” ಎಂದು ಸದಸ್ಯರನ್ನು ಪ್ರಶ್ನಿಸಿದರು.

ಇದರಿಂದ ಕೆಲಕಾಲ ಪಾಲಿಕೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಬುಧವಾರದ ಸಭೆಯಲ್ಲಿ ಮೂಲಸೌಕರ್ಯ ಸಮಸ್ಯೆಗಳ ಜೊತೆಗೆ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವುದನ್ನೂ ಸ್ಥಳೀಯ ವರದಿ ದಾಖಲಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST