ಬೆಳಗಾವಿ, ನ. 23: ನಗರದ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದಾಗ ಗಾಂಜಾ ಹಾಗೂ 30ಕ್ಕೂ ಹೆಚ್ಚು ಚರಸ್ ಪ್ಯಾಕೆಟ್ಗಳು ಪತ್ತೆಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಉಜ್ವಲ ನಗರದ ನಿವಾಸಿ ಅಬ್ದುಲ್ ಬೇಪಾರಿ ಬಂಧಿತ ಆರೋಪಿ. ಪತ್ನಿಗೆ ಹೆರಿಗೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ಸಿಬ್ಬಂದಿ ಕಲ್ಮೇಶ ಹುಕಳಿ ಅವರಿಗೆ ಅಬ್ದುಲ್ ಬೇಪಾರಿಯ ವರ್ತನೆ ಅನುಮಾನಾಸ್ಪದವಾಗಿ ಕಂಡಿದೆ. ಈ ಹಿನ್ನೆಲೆಯಲ್ಲಿ ಆತನನ್ನು ತಪಾಸಣೆಗೆ ಒಳಪಡಿಸಿದಾಗ ಜೇಬು ಹಾಗೂ ಬಟ್ಟೆಗಳಲ್ಲಿ ಅಡಗಿಸಿಟ್ಟಿದ್ದ ಒಂದು ಪ್ಯಾಕೆಟ್ ಗಾಂಜಾ ಮತ್ತು 30ಕ್ಕೂ ಹೆಚ್ಚು ಚರಸ್ ಪ್ಯಾಕೆಟ್ಗಳು ಪತ್ತೆಯಾಗಿವೆ.
ಕೂಡಲೇ ಗೃಹರಕ್ಷಕ ಸಿಬ್ಬಂದಿ ಎಪಿಎಂಸಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಮಾದಕ ವಸ್ತುಗಳು ಎಲ್ಲಿಂದ ದೊರೆತವು ಹಾಗೂ ಅವುಗಳನ್ನು ಯಾರಿಗೆ ಪೂರೈಸಲು ತಂದಿದ್ದ ಎಂಬ ಕುರಿತು ತನಿಖೆ ಮುಂದುವರಿದಿದೆ.