ಬೆಳಗಾವಿ, ನ. 14: ಖಾಸಗಿ ಫೋಟೊಗಳನ್ನು ಪತಿಗೆ ಕಳುಹಿಸಿ ಸಂಸಾರ ಹಾಳು ಮಾಡುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ ₹14 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿದ ಆರೋಪಿಯನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖನಗಾಂವ ಗ್ರಾಮದ ಸಚಿನ ಶಿವಾಜಿ ಪೂಜೇರಿ ಬಂಧಿತ ಆರೋಪಿ. ಗೋಕಾಕ ತಾಲೂಕಿನ ದೇವಗೌಡನಹಟ್ಟಿ ಗ್ರಾಮದ ಮಹಿಳೆ ನ. 8ರಂದು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ತನ್ನ ಬಳಿ ಇಬ್ಬರೂ ಜೊತೆಯಾಗಿರುವ ಖಾಸಗಿ ಫೋಟೊಗಳಿದ್ದು, ಅವುಗಳನ್ನು ಪತಿಗೆ ಕಳುಹಿಸಿ ಸಂಸಾರ ಹಾಳು ಮಾಡುವುದಾಗಿ ಆರೋಪಿ ಬೆದರಿಸಿದ್ದಾನೆ. ಪತಿಯನ್ನು ಕೊಲೆ ಮಾಡುವುದಾಗಿಯೂ ಹೆದರಿಸಿ ಸೆ. 27ರಂದು ಬೆಳಗ್ಗೆ 11 ಗಂಟೆಗೆ ದೇವಗೌಡನಹಟ್ಟಿ ಗ್ರಾಮದಲ್ಲಿ ₹14 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಬಲವಂತವಾಗಿ ಪಡೆದುಕೊಂಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ದಂಪತಿಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಂಧಿತನಿಂದ 34.74 ಗ್ರಾಂ ತೂಕದ ಬಂಗಾರದ ತಾಳಿ, 10 ಗ್ರಾಂ ಬಂಗಾರದ ಆಭರಣ, 12.58 ಗ್ರಾಂ ಬಂಗಾರದ ಸರ, ಎರಡು ಜೊತೆ ಜುಮಕಿ, ಕಿವಿಯೋಲೆ ಹಾಗೂ ಎಳೆ, 24.98 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಸರ ಮತ್ತು ₹5 ಸಾವಿರ ನಗದು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗೋಕಾಕ ಉಪಕಾರಾಗೃಹದಲ್ಲಿ ಇರಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ. ಬಸರಗಿ, ಗೋಕಾಕ ಡಿವೈಎಸ್ಪಿ ರವಿ ಡಿ. ನಾಯ್ಕ ಹಾಗೂ ಸಿಪಿಐ ವಿಜಯಕುಮಾರ ಸಿನ್ನೂರ ಮಾರ್ಗದರ್ಶನದಲ್ಲಿ ಪಿಎಸ್ಐ ಕೆ.ಬಿ. ವಾಲಿಕಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ತಾಂತ್ರಿಕ ಘಟಕದ ವಿನೋದ ಠಕ್ಕನ್ನವರ ಸಹಕರಿಸಿದ್ದಾರೆ.