ಬೆಳಗಾವಿ, ನ. 16: ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದಲ್ಲಿ ಮೀನು ಸಾಗಾಟದ ಸೋಗಿನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಮದ್ಯ ಹಾಗೂ ವಾಹನ ಸೇರಿದಂತೆ ಒಟ್ಟು ₹55.28 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಬಕಾರಿ ಉಪ ಆಯುಕ್ತ ವೈ. ಮಂಜುನಾಥ್, ನ. 14ರಂದು ರಾತ್ರಿ 11.50ರ ಸುಮಾರಿಗೆ ಬೆಳಗಾವಿ ತಾಲೂಕಿನ ಗಡಿ ಪ್ರದೇಶದ ವೈಭವ ಹೋಟೆಲ್ ಎದುರಿನ ಬಾಚಿ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಗೋವಾ ಕಡೆಯಿಂದ ಬರುತ್ತಿದ್ದ ಕೆಎ-20 ಎಎ-6449 ನೋಂದಣಿ ಸಂಖ್ಯೆಯ ಚಾಕಲೇಟ್ ಬಣ್ಣದ ಟಾಟಾ ವಾಹನದ ಚಾಲಕ, ದೂರದಿಂದಲೇ ಸಮವಸ್ತ್ರದಲ್ಲಿದ್ದ ಅಬಕಾರಿ ಅಧಿಕಾರಿಗಳನ್ನು ಗಮನಿಸಿ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿ ಕತ್ತಲಲ್ಲಿ ಪರಾರಿಯಾಗಿದ್ದಾನೆ.
ಅನುಮಾನಗೊಂಡ ಅಧಿಕಾರಿಗಳು ವಾಹನದ ಹಿಂಭಾಗದ ಬಾಗಿಲು ತೆರೆದು ಪರಿಶೀಲಿಸಿದಾಗ ಮೀನು ಸಾಗಾಟಕ್ಕೆ ಬಳಸುವ ಪ್ಲಾಸ್ಟಿಕ್ ಟ್ರೇಗಳನ್ನು ಜೋಡಿಸಿಟ್ಟಿರುವುದು ಕಂಡುಬಂದಿದೆ. ಅವುಗಳ ಕೆಳಭಾಗದಲ್ಲಿ ಯಾರಿಗೂ ಅನುಮಾನ ಬಾರದಂತೆ ಮದ್ಯದ ಬಾಕ್ಸ್ಗಳನ್ನು ವ್ಯವಸ್ಥಿತವಾಗಿ ಬಚ್ಚಿಡಲಾಗಿತ್ತು.
ವಾಹನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದಾಗ 350 ಬಾಕ್ಸ್ಗಳಲ್ಲಿ ತಲಾ 180 ಮಿಲಿಲೀಟರ್ ಸಾಮರ್ಥ್ಯದ ಬಾಟಲಿಗಳಲ್ಲಿ ತುಂಬಿದ್ದ ಒಟ್ಟು 3,024 ಲೀಟರ್ ‘ಬಿಗ್ ಬಾಸ್’ ಬ್ರಾಂಡಿಯ ಗೋವಾ ಮದ್ಯ ಪತ್ತೆಯಾಗಿದೆ. ಕರ್ನಾಟಕದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಈ ಮದ್ಯವನ್ನು ಸಾಗಿಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಜಪ್ತಿಯಾದ ಮದ್ಯದ ಮೌಲ್ಯ ₹35.28 ಲಕ್ಷ ಹಾಗೂ ಸಾಗಾಟಕ್ಕೆ ಬಳಸಿದ ಟಾಟಾ ವಾಹನದ ಮೌಲ್ಯ ₹20 ಲಕ್ಷ ಎಂದು ಅಂದಾಜಿಸಲಾಗಿದೆ. ಪರಾರಿಯಾಗಿರುವ ಚಾಲಕ ಮತ್ತು ವಾಹನದ ಮಾಲೀಕರ ಪತ್ತೆಗೆ ಶೋಧ ನಡೆಸಲಾಗುತ್ತಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ವೈ. ಮಂಜುನಾಥ್ ತಿಳಿಸಿದ್ದಾರೆ.