ಬೆಳಗಾವಿ, ನ. 23: ಜನಗಣತಿಯು ರಾಷ್ಟ್ರೀಯ ಮಹತ್ವದ ಕಾರ್ಯವಾಗಿದ್ದು, ಯಾವುದೇ ಲೋಪಗಳಿಗೆ ಅವಕಾಶ ನೀಡದೆ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಹಾಗೂ ಪ್ರಧಾನ ಜನಗಣತಿ ಅಧಿಕಾರಿ ಕಾರ್ತಿಕ್ ಎಂ. ಸೂಚಿಸಿದರು.
ನಗರದ ಮಹಾನಗರ ಪಾಲಿಕೆ ಪರಿಷತ್ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಜನಗಣತಿ–2027ರ ಕ್ಷೇತ್ರ ತರಬೇತುದಾರರ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಹಾಗೂ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಜನಗಣತಿಯ ಅಂಕಿಅಂಶಗಳು ಪ್ರಮುಖ ಆಧಾರವಾಗಿವೆ. ಹೀಗಾಗಿ ಜನಗಣತಿ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತರಬೇತಿ ಸಂದರ್ಭದಲ್ಲಿ ಯಾವುದೇ ಸಂದೇಹಗಳಿದ್ದರೆ ಪ್ರಶ್ನಿಸಿ ಪರಿಹರಿಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ನಿಖರ ಹಾಗೂ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು. ನಿಗದಿತ ಅವಧಿಯೊಳಗೆ ಜನಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಹಾಗೂ ನಗರ ಜನಗಣತಿ ಅಧಿಕಾರಿ ಡಾ. ಸಿದ್ದು ಹುಲ್ಲೋಳಿ ಅವರು ಪ್ರಾತ್ಯಕ್ಷಿಕೆ ಮೂಲಕ ಜನಗಣತಿ ಪ್ರಕ್ರಿಯೆ ಮತ್ತು ಮಾಹಿತಿ ಸಂಗ್ರಹಣೆಯ ಕುರಿತು ತರಬೇತುದಾರರಿಗೆ ವಿವರಿಸಿದರು.
ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ವಿಪಿನ್ ಶರ್ಮಾ, ಮುಖ್ಯ ತರಬೇತುದಾರರಾದ ಅಂಕಿತ ಎಂ., ಅನೂಪ ಕನೋಜ್, ವಲಯ ಆಯುಕ್ತ ಅನೀಲ ಬೋರಗಾವಿ, ರಾಜಶೇಖರ ನೇಗಿನಹಾಳ, ಪಾಲಿಕೆ ಜನಗಣತಿ ಶಾಖೆಯ ಝೀನತ್ ಮುಲ್ಲಾ, ವಸಂತ ಭರಮಣ್ಣವರ ಸೇರಿದಂತೆ ವಿವಿಧ ಅಧಿಕಾರಿಗಳು, ಕ್ಷೇತ್ರ ತರಬೇತುದಾರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.