ಬೆಂಗಳೂರು, ನ. 23: ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಲಿಂಗಾಯತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಲೇಖಕ ರವಿ ಹಂಜ್ ಅಲಿಯಾಸ್ ರವಿ ಹಂಜಗಿಮಠ ಸೋಮವಾರ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ವಚನವೊಂದನ್ನು ಉಲ್ಲೇಖಿಸಿ ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರ ಎಂಬಂತೆ ಬಿಂಬಿಸಿರುವುದು ಹಾಗೂ ‘ಲಿಂಗಾಯತ’ ಪದವನ್ನು ‘ಲಿಂಗಾಹತ’ ಎಂದು ತಿರುಚುವ ಮೂಲಕ ಸಮಾಜದ ಶಾಂತಿ ಕದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಅವರ ಮೇಲಿದೆ.
‘ಬಸವ ಮಂಟಪ’ ಕನ್ನಡ ಪುಸ್ತಕದ ಲೇಖಕರಾಗಿರುವ ರವಿ ಹಂಜ್ ಅನಿವಾಸಿ ಭಾರತೀಯರಾಗಿದ್ದು, ಅಮೆರಿಕದ ಷಿಕಾಗೊ ಮೆಟ್ರೊಪಾಲಿಟನ್ ಪ್ರದೇಶದ ಡ್ಯುಪೇಜ್ ಕೌಂಟಿಯಲ್ಲಿ ವಾಸಿಸುತ್ತಿರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಹಾಗೂ ದೂರುದಾರ ಅರವಿಂದ ಜತ್ತಿ ಅವರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ.
ತಮ್ಮ ವಿರುದ್ಧದ ದೂರು ಸುಳ್ಳು, ದುರುದ್ದೇಶಪೂರಿತ ಹಾಗೂ ಆಧಾರರಹಿತವಾಗಿದೆ. ಎಫ್ಐಆರ್ ದಾಖಲಿಸಿರುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದ್ದು, ಸಂವಿಧಾನದ 19(1)(ಎ) ವಿಧಿಯಡಿ ಖಾತರಿಪಡಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಶೈಕ್ಷಣಿಕ ಮತ್ತು ಐತಿಹಾಸಿಕ ವಿಮರ್ಶೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.