LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಸ್ತೆ ಅಪಘಾತ ತಡೆಗೆ ಎಐ ತಂತ್ರಜ್ಞಾನ: 322 ಕೋಟಿ ರೂ. ಕ್ರಿಯಾ ಯೋಜನೆ

ಬೆಂಗಳೂರು, ನ. 23: ರಾಜ್ಯದಲ್ಲಿ ರಸ್ತೆ ಅಪಘಾತಗಳು ಹಾಗೂ ಅವುಗಳಿಂದ ಸಂಭವಿಸುವ ಸಾವು-ನೋವುಗಳನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆ, ಅಪಘಾತ ವಲಯಗಳ ವೈಜ್ಞಾನಿಕ ಸುಧಾರಣೆ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಬಲಪಡಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ 24ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, 2026-27ನೇ ಸಾಲಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳಿಗಾಗಿ 322 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಇದರಲ್ಲಿ 233.11 ಕೋಟಿ ರೂ. ಮುಂದುವರಿದ ಕಾಮಗಾರಿಗಳಿಗೆ ಹಾಗೂ 88.89 ಕೋಟಿ ರೂ. ಹೊಸ ಕಾಮಗಾರಿಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದರೂ 2018ರಿಂದ 2025ರ ಅವಧಿಯಲ್ಲಿ ಪ್ರತಿ 10,000 ವಾಹನಗಳಿಗೆ ಸಂಭವಿಸುವ ಅಪಘಾತಗಳ ಪ್ರಮಾಣ ಶೇ. 27ರಷ್ಟು ಇಳಿಕೆಯಾಗಿದೆ. ಈ ಪ್ರಮಾಣ 17.28ರಿಂದ 12.56ಕ್ಕೆ ಇಳಿದಿದ್ದು, ಮರಣ ಪ್ರಮಾಣ 4.55ರಿಂದ 3.59ಕ್ಕೆ, ಅಂದರೆ ಶೇ. 21ರಷ್ಟು ಕಡಿಮೆಯಾಗಿದೆ. ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ 37,443 ಅಪಘಾತಗಳು ಸಂಭವಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೃತಪಟ್ಟವರ ಸಂಖ್ಯೆ 220ರಷ್ಟು ಕಡಿಮೆಯಾಗಿದೆ ಎಂದು ವಿವರಿಸಿದರು.

87 ಸ್ಥಳಗಳಲ್ಲಿ ಎಐ ಕ್ಯಾಮೆರಾ ವ್ಯವಸ್ಥೆ

ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪಘಾತ ನಡೆಸಿ ಪರಾರಿಯಾಗುವ ವಾಹನಗಳನ್ನು ಪತ್ತೆಹಚ್ಚಲು ಗುರುತಿಸಿರುವ 87 ಸ್ಥಳಗಳ ಪೈಕಿ 27 ಕಡೆ ಎಐ ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 20 ಕಡೆ ಇ-ಚಲನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 6,500 ಚಲನ್‌ಗಳನ್ನು ದಾಖಲಿಸಲಾಗಿದೆ. ಉಳಿದ 60 ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ಗುರುತಿಸಿರುವ ಅಪಘಾತ ಸಂಭವಿಸುವ ಅಪಾಯಕಾರಿ ಸ್ಥಳಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ಸುರಕ್ಷತಾ ಕಾಮಗಾರಿಗಳನ್ನು ಚುರುಕುಗೊಳಿಸಲು ಸೂಚಿಸಲಾಗಿದೆ.

ಚಾಲನಾ ಪರವಾನಗಿ ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಹೆಲ್ಮೆಟ್, ಸೀಟ್ ಬೆಲ್ಟ್, ವೇಗ ನಿಯಂತ್ರಣ, ಮದ್ಯಪಾನ ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯ ಅಪಾಯಗಳ ಕುರಿತು ಜಾಗೃತಿ ವಿಡಿಯೋ ಪ್ರದರ್ಶನ ಕಡ್ಡಾಯಗೊಳಿಸಲು ನಿರ್ದೇಶಿಸಲಾಗಿದೆ. ವಿಡಿಯೋ ವೀಕ್ಷಿಸಿ ಸಂಚಾರ ನಿಯಮಗಳನ್ನು ಅರಿತುಕೊಂಡಿರುವ ಬಗ್ಗೆ ಅಭ್ಯರ್ಥಿಗಳಿಂದ ಸಹಿ ಪಡೆಯುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗುವುದು.

2.50 ಲಕ್ಷ ರೂ.ವರೆಗೆ ಚಿಕಿತ್ಸಾ ನೆರವು

ಏಪ್ರಿಲ್ 15ರಿಂದ ಜಾರಿಯಲ್ಲಿರುವ ಪಿಎಂ-ರಹತ್ ಯೋಜನೆಯಡಿ ರಸ್ತೆ ಅಪಘಾತದ ಸಂತ್ರಸ್ತರಿಗೆ 7 ದಿನಗಳವರೆಗೆ ಗರಿಷ್ಠ 1.50 ಲಕ್ಷ ರೂ. ನಗದುರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ಹೆಚ್ಚುವರಿ 1 ಲಕ್ಷ ರೂ. ಸೇರಿದಂತೆ ಒಟ್ಟು 2.50 ಲಕ್ಷ ರೂ.ವರೆಗೆ ಚಿಕಿತ್ಸಾ ನೆರವು ಲಭ್ಯವಿದೆ. ರಾಜ್ಯದ 3,445 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗಿವೆ.

ತುರ್ತು ಸ್ಪಂದನೆಗಾಗಿ 108 ಮತ್ತು 102 ಆಂಬುಲೆನ್ಸ್ ಸೇವೆಗಳನ್ನು 112 ಸಹಾಯವಾಣಿಯೊಂದಿಗೆ ಸಂಯೋಜಿಸಲಾಗಿದೆ. ಹೊಸದಾಗಿ 100 ಮೂಲ ಜೀವ ರಕ್ಷಣಾ ಸೌಲಭ್ಯವುಳ್ಳ ಆಂಬುಲೆನ್ಸ್‌ಗಳ ಖರೀದಿ ಪೂರ್ಣಗೊಂಡಿದ್ದು, ಶೀಘ್ರ ಸೇವೆಗೆ ಸೇರ್ಪಡೆಯಾಗಲಿವೆ. ಜಿಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ.

ರಸ್ತೆ ಸುರಕ್ಷತೆ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಪೊಲೀಸ್, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ನಗರಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳು, ಚಿತ್ರಮಂದಿರಗಳು ಮತ್ತು ಬಸ್ ನಿಲ್ದಾಣಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST