ಬೆಂಗಳೂರು, ಸೆ 12 : - ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೋಲ್ಕತ್ತಾದ ಒಟ್ಟು 21 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ಎರಡು ದಿನಗಳ ಶೋಧ ಕಾರ್ಯಾಚರಣೆಯಲ್ಲಿ ಸುಮಾರು ₹3.3 ಕೋಟಿ ಲೆಕ್ಕಕ್ಕೆ ಸಿಗದ ನಗದು, ಸುಮಾರು ₹15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್ ಮತ್ತು ಯೂರೊ ಸೇರಿದಂತೆ ವಿದೇಶಿ ಕರೆನ್ಸಿ, ಡಿಜಿಟಲ್ ಸಾಧನಗಳು ಹಾಗೂ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ವಿದೇಶಗಳಲ್ಲಿ ಘೋಷಿಸದ ಹೂಡಿಕೆಗಳನ್ನು ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಸೆಪ್ಟೆಂಬರ್ 9 ಮತ್ತು 10ರಂದು ಏಕಕಾಲದಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ಮುಕ್ತಾಯಗೊಂಡ ಬಳಿಕ ಇಡಿ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯಲ್ಲಿ ಆಫ್ರಿಕಾದಲ್ಲಿನ ಚಿನ್ನದ ಗಣಿಗಾರಿಕೆ ಕಂಪನಿಗಳಲ್ಲಿನ ಹೂಡಿಕೆ, ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳು ಹಾಗೂ ಗುತ್ತಿಗೆದಾರರಿಂದ ಲಂಚ ಸಂಗ್ರಹಿಸಲಾಗಿದೆ ಎನ್ನಲಾದ ಆರೋಪಗಳಿಗೆ ಸಂಬಂಧಿಸಿದ ಹಲವು ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಶೋಧ ನಡೆಸಲಾದ ಸ್ಥಳಗಳಲ್ಲಿ ಸತೀಶ ಜಾರಕಿಹೊಳಿ ಅವರ ನಿವಾಸ ಮತ್ತು ಕಚೇರಿಗಳಷ್ಟೇ ಅಲ್ಲದೆ, ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ ಜಾರಕಿಹೊಳಿ, ಸಹೋದರಿ ಮಹಾದೇವಿ ಮಂಜುನಾಥ ಅವರ ಪತಿ ಹಾಗೂ ರಾಜ್ಯ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವೈ.ಡಿ. ಮಂಜುನಾಥ ಅವರಿಗೆ ಸಂಬಂಧಿಸಿದ ಸ್ಥಳಗಳೂ ಸೇರಿವೆ.
ಇದಲ್ಲದೆ ಸತೀಶ ಜಾರಕಿಹೊಳಿ ಅವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಆಪ್ತ ಸಹಾಯಕ ಮಲಗೌಡ ಪಾಟೀಲ, ಅವರ ಆಪ್ತರಾದ ರಾಜು ದರಗಶೆಟ್ಟಿ, ವಿಠ್ಠಲ ಪರಸಣ್ಣವರ ಹಾಗೂ ಡಾ. ಗಿರೀಶ ಸೋನವಾಳ್ಕರ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆಸಲಾಗಿದೆ.
ಕಾಂಗೊ ಚಿನ್ನದ ಗಣಿ ಕಂಪನಿಯಲ್ಲಿ ಶೇ.40 ಪಾಲು?
ತನಿಖೆಯ ವೇಳೆ ವಶಪಡಿಸಿಕೊಂಡ ದಾಖಲೆಗಳ ಆಧಾರದಲ್ಲಿ ಸತೀಶ ಜಾರಕಿಹೊಳಿ ಅವರು ಕಾಂಗೊದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮ್ಯಾಗ್ನಿಟ್ಯೂಡ್ ಸ್ಟಾರ್ ಎಸ್‌ಎಆರ್‌ಎಲ್ ಕಂಪನಿಯಲ್ಲಿ ಸುಮಾರು ಶೇ.40ರಷ್ಟು ಪಾಲು ಪಡೆದುಕೊಂಡಿದ್ದಾರೆ ಎಂದು ಇಡಿ ಆರೋಪಿಸಿದೆ.
ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ ಜಾರಕಿಹೊಳಿ ಹಾಗೂ ಸಹೋದರಿ ಮಹಾದೇವಿ ಮಂಜುನಾಥ ಅವರು ಆಫ್ರಿಕಾದ ವಿವಿಧ ವಿದೇಶಿ ಕಂಪನಿಗಳಲ್ಲಿ ಷೇರು ಪಾಲು ಪಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಕಾಂಗೊದಲ್ಲಿರುವ ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ ಹಾಗೂ ಜಾಂಬಿಯಾದ ನವಾ ಔರಂ ಮೈನಿಂಗ್ ಲಿಮಿಟೆಡ್ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಇವರ ಪಾಲುದಾರಿಕೆ ಇರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಇದರ ಜೊತೆಗೆ ಆಫ್ರಿಕಾದಲ್ಲಿ ಗಣಿಗಾರಿಕೆ ಆಸ್ತಿಗಳನ್ನು ಹೊಂದಿರುವ ಇನ್ನೂ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಪತ್ತೆಹಚ್ಚಲಾಗಿದೆ. ಕಾಂಗೊದಲ್ಲಿರುವ ಸಂಸ್ಥೆಯೊಂದರಲ್ಲಿ ನಗದು ರೂಪದಲ್ಲಿ ಹೂಡಿಕೆ ಹಾಗೂ ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ದೊರೆತಿದ್ದು, ಈ ಹಣವನ್ನು ಅಧಿಕೃತ ಬ್ಯಾಂಕಿಂಗ್ ಮಾರ್ಗದ ಬದಲಾಗಿ ಅನಧಿಕೃತ ಮಾರ್ಗಗಳ ಮೂಲಕ ಕಳುಹಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ ಎಂದು ಇಡಿ ಹೇಳಿದೆ.
ಲೋಕೋಪಯೋಗಿ ಗುತ್ತಿಗೆ
ವಿದೇಶಿ ಹೂಡಿಕೆಗಳ ತನಿಖೆಯೊಂದಿಗೆ ಲೋಕೋಪಯೋಗಿ ಇಲಾಖೆಯಲ್ಲಿನ ಗುತ್ತಿಗೆಗಳ ಬಗ್ಗೆಯೂ ಇಡಿ ಗಂಭೀರ ಆರೋಪ ಮಾಡಿದೆ.
ಭಾರತ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಕೆಲವು ಗುತ್ತಿಗೆದಾರರಿಂದ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಮಾಹಿತಿಗಳು ಪತ್ತೆಯಾಗಿವೆ ಎಂದು ಇಡಿ ಹೇಳಿದೆ.
ಲೋಕೋಪಯೋಗಿ ಇಲಾಖೆಯ ಗುತ್ತಿಗೆಯೊಂದನ್ನು ಪಡೆಯಲು ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ದೊಡ್ಡ ಮೊತ್ತದ ಲಂಚ ನೀಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆ ಕಂಪನಿಯ ಕಚೇರಿ ಹಾಗೂ ಅದರ ಮಾಲೀಕರು ಮತ್ತು ಅಧಿಕಾರಿಗಳ ನಿವಾಸಗಳಲ್ಲಿಯೂ ಶೋಧ ನಡೆಸಲಾಗಿದೆ.
ಗುತ್ತಿಗೆ ಪಡೆಯಲು ನೀಡಲಾಗಿದೆ ಎನ್ನಲಾದ ಹಣದ ಒಂದು ಭಾಗವನ್ನು ವಿದೇಶಗಳಲ್ಲಿ ಆಸ್ತಿ ಅಥವಾ ಗಣಿಗಾರಿಕೆ ಕಂಪನಿಗಳ ಪಾಲು ಖರೀದಿಸಲು ಬಳಸಲಾಗಿದೆಯೇ ಎಂಬುದನ್ನು ಇಡಿ ಪರಿಶೀಲಿಸುತ್ತಿದೆ.
ವೈ.ಡಿ. ಮಂಜುನಾಥ ಅವರ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿದೆ ಎನ್ನಲಾದ ಸಂಸ್ಥೆಯ ಖಾತೆಗಳಲ್ಲಿಯೂ ಅನುಮಾನಾಸ್ಪದ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಇಡಿ ಆರೋಪಿಸಿದೆ.
₹3.3 ಕೋಟಿ ನಗದು, ₹15 ಲಕ್ಷ ವಿದೇಶಿ ಕರೆನ್ಸಿ
ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೋಲ್ಕತ್ತಾದಲ್ಲಿ ನಡೆದ ಏಕಕಾಲದ ಶೋಧ ಕಾರ್ಯಾಚರಣೆಯಲ್ಲಿ ಒಟ್ಟು ₹3.3 ಕೋಟಿ ಲೆಕ್ಕಕ್ಕೆ ಸಿಗದ ಭಾರತೀಯ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ಅದರೊಂದಿಗೆ ಅಮೆರಿಕನ್ ಡಾಲರ್ ಮತ್ತು ಯೂರೊ ಸೇರಿದಂತೆ ಸುಮಾರು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಗೋಕಾಕದಲ್ಲಿರುವ ಸಚಿವರ ನಿವಾಸ, ಬೆಂಗಳೂರಿನ ಡಾಲರ್ಸ್ ಕಾಲೊನಿಯ ನಿವಾಸ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಮತ್ತು ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಹಣದ ಜೊತೆಗೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಡಿಜಿಟಲ್ ಸಾಧನಗಳು ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
‘ಸಣ್ಣಪುಟ್ಟ ತಪ್ಪುಗಳಾಗಿರಬಹುದು’: ಸತೀಶ ಜಾರಕಿಹೊಳಿ
ಇಡಿ ಶೋಧದ ನಂತರ ಪ್ರತಿಕ್ರಿಯಿಸಿರುವ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನೇ ಕೇಂದ್ರ ತನಿಖಾ ಸಂಸ್ಥೆಗಳು ಗುರಿಯಾಗಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಸಣ್ಣಪುಟ್ಟ ತಪ್ಪುಗಳಾಗಿರುವ ಸಾಧ್ಯತೆಯನ್ನು ಅಲ್ಲಗಳೆಯದ ಅವರು, ಪ್ರತಿಯೊಂದು ವ್ಯವಹಾರದಲ್ಲೂ ನಾವು ಶೇ.100ರಷ್ಟು ಸರಿಯಾಗಿದ್ದೇವೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಕೇಂದ್ರದ ತನಿಖಾ ಸಂಸ್ಥೆಗಳು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿಸುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ದೊಡ್ಡವರನ್ನು ಬಿಟ್ಟು ಸಣ್ಣವರ ಹಿಂದೆ ಕೇಂದ್ರದ ಸಂಸ್ಥೆಗಳು ಬೀಳುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಇಂತಹ ಕಾರ್ಯಾಚರಣೆಗಳ ಕುರಿತು ಕಾಂಗ್ರೆಸ್ ನಾಯಕರಿಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಕರ್ನಾಟಕದ ಎಂಟು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸುವ ಸಾಧ್ಯತೆಯಿದೆ ಎಂದು ಬಿ.ಕೆ. ಹರಿಪ್ರಸಾದ ತಮಗೆ ತಿಳಿಸಿದ್ದರು ಎಂದೂ ಸತೀಶ ಜಾರಕಿಹೊಳಿ ಹೇಳಿದ್ದಾರೆ.
‘ಇದು ದಾಳಿಯಲ್ಲ, ಶೋಧ’
ಇಡಿಯ ಕಾರ್ಯಾಚರಣೆಯನ್ನು ‘ದಾಳಿ’ ಎಂದು ಕರೆಯಬಾರದು, ಅದು ‘ಶೋಧ ಕಾರ್ಯಾಚರಣೆ’ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಸಂಭವನೀಯ ಉಲ್ಲಂಘನೆ, ವಿಶೇಷವಾಗಿ ವಿದೇಶಗಳಲ್ಲಿ ಮಾಡಲು ಉದ್ದೇಶಿಸಲಾಗಿದ್ದ ಹೂಡಿಕೆಗಳಿಗೆ ಸಂಬಂಧಿಸಿದಂತೆ ಇಡಿ ನೋಟಿಸ್ ನೀಡಿತ್ತು. ಆದರೆ ವಿದೇಶಿ ಹೂಡಿಕೆ ಇನ್ನೂ ನಡೆದಿಲ್ಲ. ಅದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳಿಂದ ಅನುಮತಿ ಪಡೆಯಲು ಪ್ರಯತ್ನಿಸಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾವು, ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರು ಶೋಧ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಇಡಿ ಅಧಿಕಾರಿಗಳಿಂದ ಯಾವುದೇ ಕಿರುಕುಳವಾಗಿಲ್ಲ ಅಥವಾ ರಾಜಕೀಯ ಒತ್ತಡ ಹೇರಲಾಗಿಲ್ಲ ಎಂದೂ ಅವರು ಹೇಳಿದ್ದಾರೆ.
ಇಡಿ ಅಧಿಕಾರಿಗಳು ಬಿಜೆಪಿಗೆ ಸೇರುವಂತೆ ತಮ್ಮನ್ನು ಕೇಳಿಲ್ಲ ಮತ್ತು ತನಿಖೆಯನ್ನು ಕೈಬಿಡುವುದಾಗಿ ಯಾವುದೇ ಆಮಿಷವನ್ನೂ ಒಡ್ಡಿಲ್ಲ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
‘ಸುಮಾರು ₹2 ಕೋಟಿ ನಮ್ಮದೇ ಹಣ’
ಶೋಧದ ವೇಳೆ ಇಡಿ ಅಧಿಕಾರಿಗಳು ದಾಖಲೆಗಳ ಜೊತೆಗೆ ತಮ್ಮ ಕುಟುಂಬಕ್ಕೆ ಸೇರಿದ್ದ ಸುಮಾರು ₹2 ಕೋಟಿ ನಗದು ತೆಗೆದುಕೊಂಡು ಹೋಗಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಆ ಹಣದ ಮಾಲೀಕತ್ವವನ್ನು ಕುಟುಂಬದವರು ಒಪ್ಪಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕಾನೂನು ಪ್ರಕ್ರಿಯೆಯ ಮೂಲಕ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ತನಿಖೆಗೆ ಮುಂದೆಯೂ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿರುವ ಅವರು, ಯಾವುದೇ ಕಾನೂನು ಪ್ರಕ್ರಿಯೆ ಎದುರಾದರೂ ಅದನ್ನು ಕಾನೂನಿನ ಮೂಲಕವೇ ಎದುರಿಸುವುದಾಗಿ ಹೇಳಿದ್ದಾರೆ.
ಇಲ್ಲಿ ಸತೀಶ ಜಾರಕಿಹೊಳಿ ಹೇಳಿರುವ ಸುಮಾರು ₹2 ಕೋಟಿ ಮತ್ತು ಇಡಿ ಅಧಿಕೃತವಾಗಿ ಹೇಳಿರುವ ಒಟ್ಟು ₹3.3 ಕೋಟಿ ಮೊತ್ತಗಳು ವಿಭಿನ್ನವಾಗಿವೆ. ಇಡಿ ಹೇಳಿರುವ ₹3.3 ಕೋಟಿ ಮೊತ್ತವು ಶೋಧ ನಡೆಸಲಾದ ಎಲ್ಲ ಸಂಬಂಧಿತ ಸ್ಥಳಗಳಿಂದ ವಶಪಡಿಸಿಕೊಂಡ ಒಟ್ಟು ಮೊತ್ತವಾಗಿದೆ.
‘ಮುಚ್ಚಿಡಲು ಏನೂ ಇಲ್ಲ’: ಶಿವಕುಮಾರ
ಸತೀಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆದ ಶೋಧದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರವೂ ತೀವ್ರಗೊಂಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಇಡಿ ಕಾರ್ಯಾಚರಣೆ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ತನ್ನ 100 ದಿನಗಳ ಸಾಧನೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿಯೇ ಈ ಶೋಧ ನಡೆದಿರುವುದು ಕಾಕತಾಳೀಯವಲ್ಲ ಎಂದು ಹೇಳಿದ್ದಾರೆ.
ಸತೀಶ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ಹಲವು ವರ್ಷಗಳಿಂದ ಉದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುಚ್ಚಿಡುವಂತಹದ್ದು ಏನೂ ಇಲ್ಲ. ತನಿಖಾ ಸಂಸ್ಥೆಯ ಪ್ರಶ್ನೆಗಳಿಗೆ ಅವರು ಕಾನೂನುಬದ್ಧವಾಗಿಯೇ ಉತ್ತರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯಾಚರಣೆಯನ್ನು ಟೀಕಿಸಿದ್ದು, ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸುವ ದೊಡ್ಡ ಕಾರ್ಯತಂತ್ರದ ಭಾಗವಾಗಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸತೀಶ ಜಾರಕಿಹೊಳಿ ಬೆಂಬಲಿಸಿ ಬೆಂಗಳೂರು ಮತ್ತು ಗೋಕಾಕ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಮುಖಂಡರೂ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ.