LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ವಿದೇಶಿ ಹೂಡಿಕೆ ಅಕ್ರಮವೇ?: ಪ್ರಿಯಾಂಕ್

ಬೆಂಗಳೂರು, ಸೆ 12 : (ಸಮದರ್ಶಿ ಸುದ್ದಿ) - ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ ಎಂಬ ಜಾರಿ ನಿರ್ದೇಶನಾಲಯದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಗಳಿವೆಯೇ ಹೊರತು ಅವು ಸಾಬೀತಾಗಿಲ್ಲ. ಸಾಕ್ಷಿ ಸಿಕ್ಕಿದೆ ಎನ್ನುವುದಾದರೆ ಅದು ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.

ಇಡಿ ಪ್ರಕಟಣೆಯಲ್ಲಿ ಮುಂದಿನ ತನಿಖೆ ನಡೆಯಬೇಕಿದೆ ಎಂದೇ ಹೇಳಲಾಗಿದೆ. ಹೀಗಿರುವಾಗ ಈಗ ಮಾಡಲಾಗುತ್ತಿರುವುದು ಆರೋಪ ಮಾತ್ರ. ಈ ಹಿಂದೆ ತನಿಖಾ ಸಂಸ್ಥೆಗಳು ಅನೇಕ ದಾಳಿಗಳ ಬಳಿಕ ಇದೇ ರೀತಿಯ ಪ್ರಕಟಣೆಗಳನ್ನು ಹೊರಡಿಸಿವೆ. 196 ದಾಳಿಗಳು ನಡೆದಿದ್ದರೂ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ತಾವು ಈ ಹಿಂದೆಯೇ ಅಂಕಿ ಅಂಶ ನೀಡಿರುವುದಾಗಿ ಹೇಳಿದ ಅವರು, ಶಿಕ್ಷೆಯ ಪ್ರಮಾಣ ಏಕೆ ಇಷ್ಟು ಕಡಿಮೆ ಎಂದು ಪ್ರಶ್ನಿಸಿದರು.

ಸತೀಶ ಜಾರಕಿಹೊಳಿ ಅವರು ವಿದೇಶದಲ್ಲಿ ಹೂಡಿಕೆ ಮಾಡುವ ಕುರಿತು ಯೋಚಿಸಿದ್ದಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನೀಡಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾನೂನುಬದ್ಧವಾಗಿ ವಿದೇಶದಲ್ಲಿ ಹೂಡಿಕೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಕಾಂಗೊ ಅಥವಾ ಬೇರೆ ಯಾವುದೇ ದೇಶದಲ್ಲಿ ಕಾನೂನಿನ ಪ್ರಕಾರ ಬಂಡವಾಳ ಹೂಡುವುದು ಅಕ್ರಮವಲ್ಲ. ಆದರೆ ಇಲ್ಲಿ ಲಂಚ ಪಡೆದ ಹಣವನ್ನು ವಿದೇಶದಲ್ಲಿ ಹೂಡಲಾಗಿದೆ ಎಂದು ಆರೋಪಿಸುವುದಾದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಇಡಿ ನೀಡಬೇಕು ಎಂದು ಒತ್ತಾಯಿಸಿದರು.

ಲೋಕೋಪಯೋಗಿ ಲಂಚದ ದಾಖಲೆ ತೋರಿಸಲಿ

ಲೋಕೋಪಯೋಗಿ ಇಲಾಖೆಯ ಗುತ್ತಿಗೆ ನೀಡಲು ಲಂಚ ಪಡೆಯಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಗುತ್ತಿಗೆಯಲ್ಲಿ ಎಷ್ಟು ಲಂಚ ಪಡೆಯಲಾಗಿದೆ ಮತ್ತು ಆ ಹಣವನ್ನು ಎಲ್ಲಿ ಹೂಡಲಾಗಿದೆ ಎಂಬುದನ್ನು ದಾಖಲೆಗಳೊಂದಿಗೆ ತೋರಿಸಲಿ. ಕೇವಲ ಆರೋಪ ಅಥವಾ ಗಾಳಿಸುದ್ದಿಗೆ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.

ಇಡಿ ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಲಾಗುತ್ತಿದೆ ಎಂದರು. ಬಿಜೆಪಿ ಶಾಸಕರು ಹಾಗೂ ಮಾಜಿ ಸಚಿವರ ವಿದೇಶ ಪ್ರವಾಸಗಳ ಬಗ್ಗೆಯೂ ಪರಿಶೀಲನೆ ನಡೆಯಲಿ. ಎಲ್ಲರೂ ತಮ್ಮ ಪಾಸ್‌ಪೋರ್ಟ್ ವಿವರಗಳನ್ನು ನೀಡಲಿ. ಕಾಂಗ್ರೆಸ್ ನಾಯಕರೂ ತನಿಖೆಗೆ ಅಗತ್ಯ ದಾಖಲೆಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಹೇಳಿದರು.

ಕಾನೂನುಬದ್ಧವಾಗಿ ಮಾಡಿರುವ ಹೂಡಿಕೆಯನ್ನು ಅಕ್ರಮ ಎಂದು ಕರೆಯಲು ಸಾಧ್ಯವಿಲ್ಲ. ಲಂಚದ ಹಣವನ್ನು ವಿದೇಶದಲ್ಲಿ ಹೂಡಲಾಗಿದೆ ಎಂಬ ಆರೋಪವಿದ್ದರೆ ಅದಕ್ಕೆ ಸಾಕ್ಷ್ಯ ಒದಗಿಸುವ ಹೊಣೆ ತನಿಖಾ ಸಂಸ್ಥೆಯ ಮೇಲಿದೆ ಎಂದು ಹೇಳಿದರು.

ತಮ್ಮನ್ನೂ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ನೀತಿಗಳು, ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಪ್ರಶ್ನೆಗಳನ್ನು ಎತ್ತುತ್ತಿರುವ ಕಾರಣಕ್ಕೆ ಪ್ರತಿಪಕ್ಷದ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST