LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಎಂಬಿಬಿಎಸ್ ಸೀಟು ಹೆಚ್ಚಳ

ಹೊಸದಿಲ್ಲಿ, ಸೆ 12 : (ಸಮದರ್ಶಿ ಸುದ್ದಿ) - ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಶುಭಸುದ್ದಿ ದೊರೆತಿದ್ದು, 2026–27ನೇ ಶೈಕ್ಷಣಿಕ ವರ್ಷಕ್ಕೆ ದೇಶದಾದ್ಯಂತ 13,186 ಹೆಚ್ಚುವರಿ ಎಂಬಿಬಿಎಸ್ ಸೀಟುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮೋದನೆ ನೀಡಿದೆ. ಇದರೊಂದಿಗೆ ದೇಶದಲ್ಲಿನ ಎಂಬಿಬಿಎಸ್ ಸೀಟುಗಳ ಸಂಖ್ಯೆ 1,40,214ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಹೆಚ್ಚಳಗೊಂಡ ಸೀಟುಗಳಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು 1,650 ಸೀಟುಗಳು ದೊರೆತಿವೆ. ಇದರಿಂದ ರಾಜ್ಯದ 76 ವೈದ್ಯಕೀಯ ಕಾಲೇಜುಗಳಲ್ಲಿನ ಎಂಬಿಬಿಎಸ್ ಸೀಟುಗಳ ಒಟ್ಟು ಸಂಖ್ಯೆ 15,745ಕ್ಕೆ ತಲುಪಿದ್ದು, ದೇಶದಲ್ಲಿಯೇ ಕರ್ನಾಟಕ ಅಗ್ರಸ್ಥಾನದಲ್ಲಿದೆ.

ಪರಿಷ್ಕೃತ ಸೀಟು ಹಂಚಿಕೆಯ ಪ್ರಕಾರ ದೇಶದ 836 ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 1,40,214 ಎಂಬಿಬಿಎಸ್ ಸೀಟುಗಳಿವೆ. ರಾಷ್ಟ್ರೀಯ ಪ್ರಾಮುಖ್ಯತೆಯ ವೈದ್ಯಕೀಯ ಸಂಸ್ಥೆಗಳ ಸೀಟುಗಳನ್ನು ಈ ಲೆಕ್ಕದಲ್ಲಿ ಸೇರಿಸಲಾಗಿಲ್ಲ.

ಹೊಸದಾಗಿ ಸೇರ್ಪಡೆಯಾದ 13,186 ಸೀಟುಗಳಲ್ಲಿ 2,786 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸೇರಿವೆ. ಇದರೊಂದಿಗೆ 445 ಸರ್ಕಾರಿ ವೈದ್ಯಕೀಯ ಕಾಲೇಜುಗಳ ಒಟ್ಟು ಪ್ರವೇಶ ಸಾಮರ್ಥ್ಯ 63,971ಕ್ಕೆ ಏರಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 10,400 ಹೊಸ ಸೀಟುಗಳು ದೊರೆತಿದ್ದು, 391 ಖಾಸಗಿ ಕಾಲೇಜುಗಳಲ್ಲಿ ಒಟ್ಟು 76,243 ಸೀಟುಗಳು ಲಭ್ಯವಾಗಲಿವೆ. ಅಂದರೆ ಹೊಸದಾಗಿ ಹೆಚ್ಚಳಗೊಂಡ ಸೀಟುಗಳಲ್ಲಿ ಸುಮಾರು ಶೇ 79ರಷ್ಟು ಖಾಸಗಿ ಕಾಲೇಜುಗಳ ಪಾಲಾಗಿವೆ.

ರಾಜ್ಯವಾರು ಹೆಚ್ಚಳದಲ್ಲಿ ಕರ್ನಾಟಕ 1,650 ಸೀಟುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡಿಗೆ 1,250, ಬಿಹಾರಕ್ಕೆ 1,240, ಉತ್ತರ ಪ್ರದೇಶಕ್ಕೆ 1,200, ರಾಜಸ್ಥಾನಕ್ಕೆ 1,100, ತೆಲಂಗಾಣಕ್ಕೆ 1,010 ಹಾಗೂ ಪಶ್ಚಿಮ ಬಂಗಾಳಕ್ಕೆ 975 ಹೆಚ್ಚುವರಿ ಸೀಟುಗಳು ದೊರೆತಿವೆ.

ಹೊಸ ಸೀಟುಗಳ ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ 15,745 ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿವೆ. ಉತ್ತರ ಪ್ರದೇಶದಲ್ಲಿ 14,400, ತಮಿಳುನಾಡಿನಲ್ಲಿ 14,299 ಹಾಗೂ ಮಹಾರಾಷ್ಟ್ರದಲ್ಲಿ 13,249 ಸೀಟುಗಳಿವೆ.

2026–27ನೇ ಶೈಕ್ಷಣಿಕ ವರ್ಷದಲ್ಲಿ ದೇಶದಾದ್ಯಂತ 38 ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಿದ್ದು, ಹೊಸ ಕಾಲೇಜುಗಳಿಗೆ ನೀಡಿರುವ ಅನುಮತಿ ಹಾಗೂ ಈಗಿರುವ ಕಾಲೇಜುಗಳ ಪ್ರವೇಶ ಸಾಮರ್ಥ್ಯದ ಹೆಚ್ಚಳವನ್ನು ಪರಿಗಣಿಸಿ ಪರಿಷ್ಕೃತ ಸೀಟು ಹಂಚಿಕೆ ಪ್ರಕಟಿಸಲಾಗಿದೆ.

ಈ ಹೆಚ್ಚಳದಿಂದ ನೀಟ್ ಮೂಲಕ ವೈದ್ಯಕೀಯ ಪ್ರವೇಶಕ್ಕಾಗಿ ಪೈಪೋಟಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಅದೇ ವೇಳೆ ವೈದ್ಯಕೀಯ ಕಾಲೇಜುಗಳು ಆಯೋಗ ಅನುಮೋದಿಸಿರುವ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಾರದು ಎಂಬ ಸೂಚನೆಯನ್ನೂ ನೀಡಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST