ಬೆಳಗಾವಿ, ಸೆ 10 : (ಸಮದರ್ಶಿ ಸುದ್ದಿ) - ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಅವರ ಕುಟುಂಬದವರು ಹಾಗೂ ಆಪ್ತರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸುತ್ತಿದ್ದ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ.
ಸೆಪ್ಟೆಂಬರ್ 9ರಂದು ಬೆಳಗ್ಗೆಯಿಂದಲೇ ಅಧಿಕಾರಿಗಳು ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ಶೋಧ ಆರಂಭಿಸಿದ್ದರು. ಹಗಲು-ರಾತ್ರಿ ನಿರಂತರವಾಗಿ ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಗುರುವಾರ ಸಂಜೆ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ್ದಾರೆ.
ಬೆಂಗಳೂರು, ಬೆಳಗಾವಿ, ಗೋಕಾಕ ಹಾಗೂ ಗೋವಾ ಸೇರಿದಂತೆ ವಿವಿಧೆಡೆ ಸತೀಶ ಜಾರಕಿಹೊಳಿ ಅವರ ಕುಟುಂಬದವರು, ಆಪ್ತರು ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಸಚಿವರ ಸಂಬಂಧಿ ಮಂಜುನಾಥ ಹಾಗೂ ಆಪ್ತರಾದ ದರಗಶೆಟ್ಟಿ,, ಡಾ. ಸೋನವಾಲ್ಕರ ಮತ್ತು ಮಲಗೌಡ ಪಾಟೀಲ ಅವರ ನಿವಾಸಗಳಲ್ಲಿಯೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಶೋಧದ ವೇಳೆ ಅಪಾರ ಪ್ರಮಾಣದ ಹಣಕಾಸು ದಾಖಲೆಗಳು, ಸ್ಥಿರ-ಚರ ಆಸ್ತಿಗಳಿಗೆ ಸಂಬಂಧಿಸಿದ ಪತ್ರಗಳು, ವಿವಿಧ ಹೂಡಿಕೆಗಳ ವಿವರಗಳು ಹಾಗೂ ಶಂಕಿತ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ ಎನ್ನಲಾಗಿದೆ.
ಗೋಕಾಕಿನ ಹಿಲ್ಸ್ ಗಾರ್ಡನ್‌ನಲ್ಲಿರುವ ನಿವಾಸಕ್ಕೆ ಸಂಬಂಧಿಸಿದಂತೆ ಇಂಡಿಯನ್ ಬ್ಯಾಂಕ್ ಸಿಬ್ಬಂದಿಯನ್ನು ಕರೆಸಿ ಬ್ಯಾಂಕ್ ವಹಿವಾಟುಗಳ ಕುರಿತ ಮಾಹಿತಿಯನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಂಗಳೂರು, ಬೆಳಗಾವಿ ಹಾಗೂ ಗೋಕಾಕಿನ ಎಲ್ಲ ಕಡೆಗಳಲ್ಲಿಯೂ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ.
ದಾಳಿ ಮುಕ್ತಾಯಗೊಂಡ ನಂತರ ಸತೀಶ ಜಾರಕಿಹೊಳಿ ಅವರ ನಿವಾಸದಿಂದ ಅಧಿಕಾರಿಗಳು ಹೊರಬಂದಿದ್ದು, ಶೋಧದ ವೇಳೆ ಸಂಗ್ರಹಿಸಿರುವ ದಾಖಲೆಗಳು ಹಾಗೂ ಮಾಹಿತಿಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯುವ ಸಾಧ್ಯತೆ ಇದೆ.