LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಮಹಿಳಾ ಮೀಸಲಾತಿಗೆ ಕ್ಷೇತ್ರ ಮರುವಿಂಗಡಣೆ ಷರತ್ತು ಏಕೆ?: ಖರ್ಗೆ ಪ್ರಶ್ನೆ

ಕಲಬುರಗಿ, ಅ. 21 (ಸಮದರ್ಶಿ ಸುದ್ದಿ): ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯವರೆಗೆ ಕಾಯುವ ಅಗತ್ಯವೇನಿದೆ? ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸುವ ಬದ್ಧತೆಯಿದ್ದರೆ ತಕ್ಷಣವೇ ಮೀಸಲಾತಿ ಜಾರಿಗೊಳಿಸಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.

ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಕಾಯ್ದೆಗೆ ಕಾಂಗ್ರೆಸ್ ಈಗಾಗಲೇ ಬೆಂಬಲ ನೀಡಿದೆ. ಅದರ ಅನುಷ್ಠಾನಕ್ಕೂ ಸಂಪೂರ್ಣ ಸಹಕಾರ ನೀಡಲಿದೆ. ಹೀಗಿದ್ದರೂ ಕ್ಷೇತ್ರಗಳ ಮರುವಿಂಗಡಣೆಯೊಂದಿಗೆ ಮೀಸಲಾತಿಯನ್ನು ತಳುಕು ಹಾಕುತ್ತಿರುವ ಕೇಂದ್ರ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಒಟ್ಟಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿ. ರಿಜಿಜು ಅವರಿಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ. ಮೋದಿ ಮತ್ತು ಅಮಿತ್ ಶಾ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಅಧಿಕಾರವಿದ್ದರೆ ನಾಳೆಯೇ ಮಹಿಳಾ ಮೀಸಲಾತಿ ಜಾರಿಗೊಳಿಸಿ ತೋರಿಸಲಿ ಎಂದರು.

ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಅನುದಾನದ ಕೊರತೆಯಿಂದ ಹಲವು ವಿಶ್ವವಿದ್ಯಾಲಯಗಳು ಸಂಕಷ್ಟ ಎದುರಿಸುತ್ತಿವೆ. ಯುವಜನರಿಗೆ ಉದ್ಯೋಗ ಸೃಷ್ಟಿಸುವುದು, ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಒದಗಿಸುವುದು ಹಾಗೂ ಜನಪರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ಬದಲು ಕೇಂದ್ರ ಸರ್ಕಾರ ಬೇರೆ ವಿಷಯಗಳಿಗೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದ ಖರ್ಗೆ, ಚುನಾವಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರ್ಬಳಕೆ ನಡೆಯುತ್ತಿದೆ ಎಂದು ಆರೋಪಿಸಿದರು. ಮತದಾರರ ಪಟ್ಟಿಯಲ್ಲಿ ಹಸ್ತಕ್ಷೇಪ ಹಾಗೂ ನಕಲಿ ಮತದಾನದ ಮೂಲಕ ಬಿಜೆಪಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ದೂರಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಬೇಕು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ 2023ರ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷಗಳ ವಿರೋಧದ ನಡುವೆಯೇ ಚುನಾವಣಾ ಆಯುಕ್ತರಿಗೆ ವಿಶೇಷ ಕಾನೂನು ರಕ್ಷಣೆ ಒದಗಿಸುವ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಿಗೂ ಇಲ್ಲದಂತಹ ರಕ್ಷಣೆಯನ್ನು ಚುನಾವಣಾ ಆಯುಕ್ತರಿಗೆ ನೀಡುವ ಅಗತ್ಯವೇನಿತ್ತು? ಇದು ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ತರುವ ಕ್ರಮ ಎಂದು ಆರೋಪಿಸಿದರು.

ಪ್ರತಿಪಕ್ಷಗಳ ಪ್ರತಿಭಟನೆಗಳನ್ನು ಬಿಜೆಪಿ ನಾಯಕರು ಲಘುವಾಗಿ ಪರಿಗಣಿಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗುತ್ತದೆ. ಕಾಂಗ್ರೆಸ್ ನೇತೃತ್ವದಲ್ಲಿ 8ರಿಂದ 10 ಸಾವಿರ ಜನರು ಪ್ರತಿಭಟಿಸಿದರೆ ಏನಾಗುತ್ತದೆ ಎಂದು ಪ್ರಶ್ನಿಸುವವರು, ದೇಶದ ಕೋಟ್ಯಂತರ ಜನರು ಬೀದಿಗಿಳಿದರೆ ಅವರ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವೇ ಎಂದು ಕೇಳಿದರು.

ರಾಹುಲ್ ಗಾಂಧಿ, ಜವಾಹರಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಅವರನ್ನು ಟೀಕಿಸುವುದನ್ನೇ ಬಿಜೆಪಿ ನಾಯಕರು ಮುಂದುವರಿಸಿದ್ದಾರೆ. ರಾಜೀವ್ ಗಾಂಧಿ ಅವರ ನಂತರ ಆ ಕುಟುಂಬದ ಯಾರಾದರೂ ಪ್ರಧಾನಮಂತ್ರಿ ಅಥವಾ ಕೇಂದ್ರ ಸಚಿವರಾಗಿದ್ದಾರೆಯೇ? ಅನಗತ್ಯ ಟೀಕೆಗಳನ್ನು ಬಿಟ್ಟು ದೇಶದ ಅಭಿವೃದ್ಧಿಗೆ ಗಮನಹರಿಸಲಿ ಎಂದರು.

ಅಕ್ಟೋಬರ್ 24ರಂದು ಇಂಡಿಯಾ ಒಕ್ಕೂಟದ ಸಭೆ ನಡೆಯಲಿದ್ದು, ಎಸ್‌ಐಆರ್‌ ವಿರುದ್ಧದ ಹೋರಾಟ, ಚುನಾವಣಾ ಸುಧಾರಣೆ ಹಾಗೂ ಮುಂದಿನ ರಾಜಕೀಯ ಕಾರ್ಯಕ್ರಮಗಳ ಕುರಿತು ಮಿತ್ರಪಕ್ಷಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

2023ರ ಕಾಯ್ದೆಗೆ ಬೆಂಬಲ ನೀಡಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೂ ಈಗ ತಮ್ಮ ನಿಲುವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕಾಯ್ದೆಯನ್ನು ಬೆಂಬಲಿಸಿದ್ದು ತಪ್ಪು ಎಂದು ಒಪ್ಪಿಕೊಂಡು ಜನರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಖರ್ಗೆ ಹೇಳಿದರು.

ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೇಂದ್ರ ಸರ್ಕಾರದ ಕ್ರಮಗಳ ವಿರುದ್ಧ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿವೆ ಎಂದು ಸ್ಪಷ್ಟಪಡಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹುಲಿಕೇರಿ ಕೆರೆಯಲ್ಲಿ ಮುಳುಗಿ ಯುವಕನ ಸಾವುಚುನಾವಣಾ ಆಯುಕ್ತರಿಗೆ ಕಾನೂನು ರಕ್ಷಣೆ ರದ್ದುಪಡಿಸಿ, ಜ್ಞಾನೇಶ ಕುಮಾರ ವಜಾಗೊಳಿಸಿ: ಖರ್ಗೆ ಆಗ್ರಹಬುಲೆರೋ–ಟ್ರ್ಯಾಕ್ಟರ್ ಅಪಘಾತ: ಯುವಕ ಸಾವುಪೊಲೀಸರು ಎಲ್ಲರನ್ನೂ ಸಮಾನವಾಗಿ ಕಾಣಬೇಕು: ಡಿ.ಕೆ. ಶಿವಕುಮಾರಅಜರುದ್ದೀನ್ ಅವರ 28 ವರ್ಷಗಳ ದಾಖಲೆ ಮುರಿದ ಬವುಮಾಮೈಸೂರು ದಸರಾ ಜಂಬೂಸವಾರಿಗೆ ಚಾಲನೆ: ಚಾಮುಂಡೇಶ್ವರಿಗೆ ಡಿ.ಕೆ. ಶಿವಕುಮಾರ ಪುಷ್ಪಾರ್ಚನೆಎಪ್‌ಸ್ಟೀನ್ ಜೊತೆ ಹರ್ದೀಪ್ ಪುರಿ ಏಕಾಂಗಿ ಭೇಟಿ: ಫೋಟೊ ಬಿಡುಗಡೆ ಮಾಡಿ ಪ್ರತಿಪಕ್ಷಗಳ ಪ್ರಶ್ನೆಸಾಂವಿಧಾನಿಕ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಪತ್ರತೃಣಮೂಲ ತೊರೆದು ಎನ್‌ಡಿಎ ಬೆಂಬಲಿಸಿದ ಯೂಸುಫ ಪಠಾಣಗೆ ₹20.53 ಕೋಟಿ ಮೌಲ್ಯದ ಜಮೀನುಎಸ್‌ಐಆರ್‌ ಪ್ರಕ್ರಿಯೆಯಲ್ಲಿ 4 ನಿಯಮ ಸಡಿಲಿಸಿದ ಚುನಾವಣಾ ಆಯೋಗ