ಶಿವಮೊಗ್ಗ, ಅ. 21 (ಸಮದರ್ಶಿ ಸುದ್ದಿ): ಶಿವಮೊಗ್ಗ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಏಕಾಏಕಿ ನಿಯಂತ್ರಣ ತಪ್ಪಿದ ಪರಿಣಾಮ ಚಾಮುಂಡೇಶ್ವರಿ ದೇವಿಯ ಮೂರ್ತಿ ಇರಿಸಿದ್ದ ಬೆಳ್ಳಿಯ ಅಂಬಾರಿ ನೆಲಕ್ಕೆ ಬಿದ್ದು ಹಾನಿಗೊಳಗಾಗಿದೆ. ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಮೆರವಣಿಗೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ.
ನಗರದ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆಯಿಂದ ಜಂಬೂಸವಾರಿ ಮೆರವಣಿಗೆ ಆರಂಭವಾಗಿತ್ತು. ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ಹಿಂದಕ್ಕೆ ಚಲಿಸಿತು. ಆನೆಯ ಅನಿರೀಕ್ಷಿತ ವರ್ತನೆಯಿಂದ ಅಂಬಾರಿ ಕೆಳಗೆ ಬಿದ್ದು ಹಾನಿಗೊಳಗಾಯಿತು.
ಆನೆ ನಿಯಂತ್ರಣ ತಪ್ಪಿ ಸಾಗುತ್ತಿದ್ದ ವೇಳೆ ರಸ್ತೆಯಲ್ಲಿದ್ದ 2 ಕಾರುಗಳು ಹಾಗೂ 3 ಬೈಕ್‌ಗಳಿಗೆ ಹಾನಿಯಾಗಿದೆ. ಮೆರವಣಿಗೆಯನ್ನು ವೀಕ್ಷಿಸಲು ಸೇರಿದ್ದ ಜನರು ಭಯದಿಂದ ದಿಕ್ಕಾಪಾಲಾಗಿ ಓಡಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಆನೆಯನ್ನು ಹತೋಟಿಗೆ ತರಲು ಮಾವುತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟರು. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಂಬೂಸವಾರಿ ಮೆರವಣಿಗೆಯನ್ನು ಮುಂದುವರಿಸದಿರಲು ನಿರ್ಧರಿಸಲಾಯಿತು.
ಘಟನೆಯ ಬಳಿಕ ಸೋಮಣ್ಣ ಆನೆಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದರು. ಅದ್ದೂರಿಯಾಗಿ ನಡೆಯಬೇಕಿದ್ದ ಶಿವಮೊಗ್ಗ ದಸರಾ ಜಂಬೂಸವಾರಿ ಅನಿರೀಕ್ಷಿತ ಘಟನೆಯಿಂದ ಅರ್ಧದಲ್ಲೇ ಮೊಟಕುಗೊಂಡಿತು.