ಅಳ್ನಾವರ, ಅ. 21 (ಸಮದರ್ಶಿ ಸುದ್ದಿ): ಹಬ್ಬದ ಸಂಭ್ರಮದಲ್ಲಿ ಕುಟುಂಬದವರೊಂದಿಗೆ ಕೆರೆಗೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ತಾಲೂಕಿನ ಹುಲಿಕೇರಿಯ ಇಂದಿರಮ್ಮನ ಕೆರೆಯಲ್ಲಿ ಸಂಭವಿಸಿದೆ.
ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಗಣೇಶ ಕೇದಾರ್ಜಿ ಪೂಜಾರಿ (18) ಮೃತಪಟ್ಟ ಯುವಕ.
ಹಬ್ಬದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಹುಲಿಕೇರಿ ಕೆರೆಗೆ ಆಗಮಿಸಿದ್ದ ಗಣೇಶ, ಸ್ನಾನಕ್ಕೆಂದು ನೀರಿಗೆ ಇಳಿದಿದ್ದ. ಈ ವೇಳೆ ಕೆರೆಯ ಆಳದ ಅರಿವಿಲ್ಲದೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.