ಹೊಸದಿಲ್ಲಿ, ಅ. 24: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರಿಂದ ಪೆಲೆಟ್ ಗನ್ ಬಳಕೆ, ಮಹಿಳಾ ಪ್ರತಿಭಟನಾಕಾರರಿಗೆ ಕಿರುಕುಳ ಹಾಗೂ ಹಿಂಸಾಚಾರ ನಡೆದಿರುವ ಆರೋಪಗಳ ಕುರಿತು ಸುಪ್ರೀಂ ಕೋರ್ಟ ನೇಮಿಸಿರುವ ಉನ್ನತಾಧಿಕಾರ ಸಮಿತಿಯು ಅಕ್ಟೋಬರ್ 29 ಮತ್ತು 30ರಂದು ವಿಚಾರಣೆ ನಡೆಸಲಿದೆ.
ಸುಪ್ರೀಂ ಕೋರ್ಟನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಶ ರೆಡ್ಡಿ ನೇತೃತ್ವದ ಐವರು ಸದಸ್ಯರ ಸಮಿತಿಯು ಎರಡು ದಿನಗಳ ಕಾಲ ಸಂತ್ರಸ್ತರು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಲಿಸಿ, ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದಿಲ್ಲಿಯ ಶಿಕ್ಷಾ ಸದನದಲ್ಲಿರುವ ಸಮಿತಿಯ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ವಿಚಾರಣೆ ನಡೆಯಲಿದೆ. ಹಿಂಸಾಚಾರದಿಂದ ಬಾಧಿತರಾದವರು, ಸಾಕ್ಷಿಗಳು ಹಾಗೂ ಸಾರ್ವಜನಿಕರು ಬೆಳಗ್ಗೆ 11.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತಮ್ಮ ದೂರುಗಳು ಮತ್ತು ಪುರಾವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್ ಬಳಸಿರುವುದು, ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿರುವುದು, ಮಹಿಳೆಯರಿಗೆ ಕಿರುಕುಳ ನೀಡಿರುವುದು, ಉಭಯ ಕಡೆಯಿಂದ ಬಲಪ್ರಯೋಗ ಹಾಗೂ ಆಸ್ತಿಪಾಸ್ತಿ ಹಾನಿ ಸಂಭವಿಸಿರುವ ಆರೋಪಗಳನ್ನು ಸಮಿತಿ ಪರಿಶೀಲಿಸಲಿದೆ.
ಜುಲೈನಲ್ಲಿ ಕಾಕ್ರೋಚ್ ಜನತಾ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂಬ ಆರೋಪದಡಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ ಸ್ವತಂತ್ರ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಿತ್ತು.
ಸಂತ್ರಸ್ತರು ಮತ್ತು ಸಾಕ್ಷಿಗಳು ಮುಕ್ತವಾಗಿ ಮಾಹಿತಿ ನೀಡಲು ಅನುಕೂಲವಾಗುವಂತೆ ಸಮಿತಿಯು ವಿಶೇಷ ಅಂತರ್ಜಾಲ ವ್ಯವಸ್ಥೆಯನ್ನೂ ಆರಂಭಿಸಿದೆ. ಈ ಮೂಲಕ ಘಟನೆಗೆ ಸಂಬಂಧಿಸಿದ ಹೇಳಿಕೆಗಳು ಹಾಗೂ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸಾಕ್ಷಿಗಳ ರಕ್ಷಣೆ ಮತ್ತು ನಿಷ್ಪಕ್ಷಪಾತ ವಿಚಾರಣೆಗೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.