LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ಸರ್ಕಾರವನ್ನು ಪ್ರಶ್ನಿಸಿದರೆ ಶಾಂತಿ ಭಂಗವೇ?: ಬಾಂಡ್‌ಗೆ ಸಹಿ ಹಾಕಲು ನೇಹಾ ಬೋರಾ ನಿರಾಕರಣೆ

ಹೊಸದಿಲ್ಲಿ, ಅ. 24: ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ಶಾಂತಿ ಭಂಗಕ್ಕೆ ಸಮಾನವೇ? ಅನ್ಯಾಯವನ್ನು ಪ್ರಶ್ನಿಸದೆ ಮೌನವಾಗಿರುವುದೇ ಶಾಂತಿಯೇ ಎಂದು ಪ್ರಶ್ನಿಸಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ, ದೆಹಲಿ ಪೊಲೀಸರು ಜಾರಿಗೊಳಿಸಿರುವ ಶಾಂತಿ ಬಾಂಡ್‌ಗೆ ಸಹಿ ಹಾಕಲು ನಿರಾಕರಿಸಿದ್ದಾರೆ. ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಶನಿವಾರ ಆರೋಪಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ಹೊಸದಿಲ್ಲಿಯಲ್ಲಿ 'ಲಹರಾ ದೋ ತಿರಂಗಾ' ಮೆರವಣಿಗೆ ಆಯೋಜಿಸಲಾಗಿತ್ತು. ಮಂಡಿ ಹೌಸ್‌ನಲ್ಲಿ ಪ್ರತಿಭಟನೆ ಆರಂಭವಾದ 10 ನಿಮಿಷಗಳಲ್ಲೇ ಬೋರಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮರುದಿನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಕಲಂ 126ರ ಅಡಿಯಲ್ಲಿ ಬೋರಾ ಅವರಿಗೆ ನೋಟಿಸ್ ನೀಡಲಾಗಿತ್ತು. ಅಕ್ಟೋಬರ್ 19ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ, ವಿಚಾರಣೆಯ ಅವಧಿಯಲ್ಲಿ ಶಾಂತಿ ಕಾಪಾಡುವ ಭರವಸೆಯಾಗಿ 10,000 ರೂ. ವೈಯಕ್ತಿಕ ಬಾಂಡ್ ಹಾಗೂ ಒಬ್ಬ ಜಾಮೀನುದಾರರನ್ನು ಒದಗಿಸುವಂತೆ ಏಕೆ ಆದೇಶಿಸಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಸೂಚಿಸಲಾಗಿತ್ತು.

ಈ ಕ್ರಮವು ಸಂವಿಧಾನದ 19 ಮತ್ತು 21ನೇ ವಿಧಿಗಳಡಿ ಖಾತರಿಪಡಿಸಿರುವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬೋರಾ ದೆಹಲಿ ಹೈಕೋರ್ಟ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ ಅವರ ಪೀಠವು ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿತ್ತು.

ಸಿಪಿಐ (ಎಂಎಲ್) ಲಿಬರೇಷನ್ ಪಕ್ಷದ ಸಂಸದೀಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೋರಾ, ನ್ಯಾಯಾಲಯವು ತಮ್ಮ ಅರ್ಜಿಯ ಮೂಲ ಪ್ರಶ್ನೆಗಳ ಕುರಿತು ಅಂತಿಮ ತೀರ್ಮಾನ ನೀಡಿಲ್ಲ. ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ವಾದ ಮಂಡಿಸಲು ಅವಕಾಶವಿದೆ. ಕಾರಣ ಕೇಳುವ ನೋಟಿಸ್ ನೀಡಿದ ಮಾತ್ರಕ್ಕೆ ಬಾಂಡ್‌ಗೆ ಸಹಿ ಹಾಕುವಂತೆ ಬಲವಂತಪಡಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಸಂವಿಧಾನವು ನಾಗರಿಕರಿಗೆ ಸರ್ಕಾರವನ್ನು ಪ್ರಶ್ನಿಸುವ ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ನೀಡಿದೆ. ಆದರೆ, ಅದೇ ಹಕ್ಕನ್ನು ಚಲಾಯಿಸುವವರ ವಿರುದ್ಧ ಶಾಂತಿ ಭಂಗದ ನೆಪದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಂಡ್‌ಗೆ ಸಹಿ ಹಾಕುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಿಟ್ಟುಕೊಟ್ಟಂತೆ ಎಂದು ಅವರು ಹೇಳಿದರು.

ಅಕ್ಟೋಬರ್ 16ರ ಪ್ರತಿಭಟನೆಯಲ್ಲಿ ಯಾವುದೇ ಹಿಂಸಾತ್ಮಕ ಚಟುವಟಿಕೆ ನಡೆದಿರಲಿಲ್ಲ. ಆದರೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರ ಬಟ್ಟೆ ಹರಿದಿದ್ದಾರೆ. ಪತ್ರಕರ್ತರು ಹಾಗೂ ಸ್ವತಂತ್ರ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಈ ಆರೋಪಗಳ ಕುರಿತು ಪೊಲೀಸರ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ 13 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ ಬೋರಾ, ಮಾನ್ಯ ದಾಖಲೆಗಳಿದ್ದರೂ ಮತದಾನದ ಹಕ್ಕಿನಿಂದ ವಂಚಿತರಾದವರು ನ್ಯಾಯಕ್ಕಾಗಿ ಪ್ರತಿಭಟಿಸುವುದು ತಪ್ಪೇ ಎಂದು ಪ್ರಶ್ನಿಸಿದರು. ಆದರೆ, 13 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಕ್ಕೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.

ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಮಾಧ್ಯಮ ವರದಿಗಳು, ಸ್ಥಳೀಯ ಅಧಿಕಾರಿಗಳ ಹೇಳಿಕೆಗಳು ಹಾಗೂ ಚುನಾವಣಾ ಆಯುಕ್ತರ ನಡುವಿನ ಭಿನ್ನಾಭಿಪ್ರಾಯಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ಮತದಾನದ ಹಕ್ಕಿನಷ್ಟೇ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಹಕ್ಕೂ ಪ್ರಜಾಪ್ರಭುತ್ವದಲ್ಲಿ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ವಿರುದ್ಧದ ಹೋರಾಟ ಮುಂದುವರಿಯಲಿದೆ. ಶಾಂತಿ ಎನ್ನುವುದು ಕೇವಲ ಸರ್ಕಾರದ ಹಿತಾಸಕ್ತಿಗೆ ಸೀಮಿತವಾಗಿರಬಾರದು. ನಾಗರಿಕರ ಹಕ್ಕುಗಳಿಗೂ ರಕ್ಷಣೆ ದೊರೆಯಬೇಕು. ಪ್ರತಿಭಟನೆಗಳನ್ನು ನಿಯಂತ್ರಿಸಲು ಶಾಂತಿ ಬಾಂಡ್‌ಗಳನ್ನು ಬಳಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಇಂತಹ ಕ್ರಮಗಳ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ನೇಹಾ ಬೋರಾ ಘೋಷಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಿನಿ ರಜನೀಶ ಸೇರಿ 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಆಗ್ರಹಅಶಾಂತಿಗೆ ಇಸ್ರೇಲ್ ಆಕ್ರಮಣವೇ ಕಾರಣ: 4 ರಾಷ್ಟ್ರಗಳ ಜಂಟಿ ಹೇಳಿಕೆವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲಕಾನೂನಿನ ಭಯವೇ ಇಲ್ಲವೇ?: ಉದ್ರಿ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್ ಮಾಲಕನ ಹತ್ಯೆಗೋಲ್ಡನ್ ಚಾರಿಯಟ್ ರೈಲಿಗೆ ಮರುಚಾಲನೆ: ಟಿಕೆಟ್ ದರ 3.5 ಲಕ್ಷದಿಂದ 4.4 ಲಕ್ಷ ರೂ.ಪೆಲೆಟ್ ಗನ್ ಬಳಕೆ, ಮಹಿಳೆಯರಿಗೆ ಕಿರುಕುಳ : ಸುಪ್ರೀಂ ಕೋರ್ಟ ಸಮಿತಿಯಿಂದ ವಿಚಾರಣೆಸಿದ್ದರಾಮಯ್ಯ ಕುಟುಕು ಕಾರ್ಯಾಚರಣೆ : ದೆಹಲಿಯ ರಿತೇಶ ಪಾಂಡೆ ಬಂಧನಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಮುಖಕ್ಕೆ ಗಂಭೀರ ಗಾಯಚಿರತೆ ಸೆರೆ ವೇಳೆ ಅರಣ್ಯ ಇಲಾಖೆ ವೈದ್ಯರ ಮೇಲೆ ಹಲ್ಲೆ: 15 ಮಂದಿ ವಿರುದ್ಧ ಪ್ರಕರಣಸರ್ಕಾರವನ್ನು ಪ್ರಶ್ನಿಸಿದರೆ ಶಾಂತಿ ಭಂಗವೇ?: ಬಾಂಡ್‌ಗೆ ಸಹಿ ಹಾಕಲು ನೇಹಾ ಬೋರಾ ನಿರಾಕರಣೆ