LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲ

ಬಿಜೆಪಿ ವಿರುದ್ಧ ಹಿರಿಯ ನಟನ ವಾಗ್ದಾಳಿ; ವಿದ್ಯಾರ್ಥಿಗಳ ಸುರಕ್ಷತೆ ಕುರಿತು ನಿರ್ದೇಶಕಿ ಕಳವಳ

ಕೋಲ್ಕತ್ತಾ: ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ (ಎಸ್‌ಆರ್‌ಎಫ್‌ಟಿಐ) ಆಡಳಿತದ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹಿರಿಯ ನಟ ನಾಸಿರುದ್ದೀನ್ ಶಾ ಹಾಗೂ ನಿರ್ದೇಶಕಿ ಪಾಯಲ್ ಕಪಾಡಿಯಾ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಹಲ್ಲೆ ಆರೋಪ, ತರಗತಿಗಳ ಸ್ಥಗಿತ ಹಾಗೂ ವಸತಿನಿಲಯ ತೆರವು ಸೂಚನೆಗಳಿಂದ ವಿವಾದ ತೀವ್ರಗೊಂಡಿದೆ.

ಸಂಸ್ಥೆಯ ಕುಲಪತಿ ಸಂತೋಷ ಅಜ್ಮೇರಾ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 28ರಿಂದ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಸಂಘಟನೆಗಳ ಚಟುವಟಿಕೆಗಳನ್ನು ಪ್ರಶ್ನಿಸಿದ್ದಕ್ಕಾಗಿ ತಮ್ಮನ್ನು ಗುರಿಯಾಗಿಸಲಾಗಿದೆ ಎಂಬುದು ವಿದ್ಯಾರ್ಥಿಗಳ ಆರೋಪ.

ಸಾಮಾಜಿಕ ಜಾಲತಾಣದ ವಿಡಿಯೊ ಸಂದೇಶದಲ್ಲಿ ನಾಸಿರುದ್ದೀನ್ ಶಾ, ಬಿಜೆಪಿ ತನ್ನ ಸಿದ್ಧಾಂತವನ್ನು ಒಪ್ಪದವರ ವಿರುದ್ಧ ಪ್ರತೀಕಾರದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಭವಿಷ್ಯದ ಚಲನಚಿತ್ರ ನಿರ್ದೇಶಕರು ಮತ್ತು ಕಲಾವಿದರನ್ನು ಬೆದರಿಸಿ ಅವರ ಸ್ವತಂತ್ರ ಚಿಂತನೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದ ವಾಸ್ತವಗಳನ್ನು ಜನರ ಮುಂದಿಡುವ ಯುವ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

2024ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಪಡೆದ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರದ ನಿರ್ದೇಶಕಿ ಪಾಯಲ್ ಕಪಾಡಿಯಾ, ವಿದ್ಯಾರ್ಥಿಗಳ ಸುರಕ್ಷತೆ ಖಚಿತಪಡಿಸುವ ಬದಲು ಅವರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿರುವುದು ಆಘಾತಕಾರಿ ಎಂದು ಟೀಕಿಸಿದ್ದಾರೆ.

ವಿದ್ಯಾರ್ಥಿಗಳ ಪ್ರಕಾರ, ಸೆಪ್ಟೆಂಬರ್ 27ರಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯರ ಚಟುವಟಿಕೆಗಳನ್ನು ವಿರೋಧಿಸಿದ ಸಂದರ್ಭದಲ್ಲಿ ಹಲ್ಲೆ ನಡೆದಿದೆ. ಅಕ್ಟೋಬರ್ 4ರಂದು ಸಂಸ್ಥೆಯ ಮುಖ್ಯದ್ವಾರದ ಬಳಿ ಬಾಂಗಿಯಾ ಹಿಂದೂ ಜಾಗರಣ ಮಂಚ್ ನಡೆಸಿದ ರ್ಯಾಲಿಯ ಸಂದರ್ಭದಲ್ಲೂ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಘಟನೆಗಳ ಕುರಿತು ತನಿಖೆ ನಡೆಸುವ ಬದಲು ಪ್ರಶ್ನಿಸಿದ ವಿದ್ಯಾರ್ಥಿಗಳನ್ನೇ ಶಿಕ್ಷಿಸಲು ಆಡಳಿತ ಮುಂದಾಗಿದೆ. ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಗೂ ಸುಲಿಗೆ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆಯೂ ಕ್ರಮ ಕೈಗೊಂಡಿಲ್ಲ ಎಂದು ಕಪಾಡಿಯಾ ದೂರಿದ್ದಾರೆ.

ಅಕ್ಟೋಬರ್ 16ರಂದು ಆದೇಶ ಹೊರಡಿಸಿರುವ ಸಂಸ್ಥೆಯ ಆಡಳಿತ, ಚಲನಚಿತ್ರ ನಿರ್ಮಾಣ ಮತ್ತು ವಿಡಿಯೊ ವಿಭಾಗಗಳ ತರಗತಿಗಳನ್ನು ನವೆಂಬರ್ 13ರವರೆಗೆ ಸ್ಥಗಿತಗೊಳಿಸಿದೆ. ವಿದ್ಯಾರ್ಥಿಗಳಿಗೆ ವಸತಿನಿಲಯ ಖಾಲಿ ಮಾಡುವಂತೆಯೂ ಸೂಚಿಸಲಾಗಿದೆ.

ವಿದ್ಯಾರ್ಥಿ ಸಂಘದ ವಕ್ತಾರ ಸುದೀಪ ಚಕ್ರವರ್ತಿ, ಸಂಸ್ಥೆಯಲ್ಲಿ ಹೊರಗಿನ ಸಂಘಟನೆಗಳ ಅನಧಿಕೃತ ಚಟುವಟಿಕೆಗಳನ್ನು ತಡೆಯಬೇಕು. ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕುಲಪತಿಯ ರಾಜೀನಾಮೆ, ಹಲ್ಲೆ ಆರೋಪಗಳ ತನಿಖೆ ಹಾಗೂ ತರಗತಿಗಳ ಪುನರಾರಂಭಕ್ಕೆ ಒತ್ತಾಯಿಸಿ ಧರಣಿ ಮುಂದುವರಿದಿದೆ. ಚಿತ್ರರಂಗದ ಪ್ರಮುಖರ ಬೆಂಬಲದಿಂದ ವಿದ್ಯಾರ್ಥಿಗಳ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಿನಿ ರಜನೀಶ ಸೇರಿ 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಆಗ್ರಹಅಶಾಂತಿಗೆ ಇಸ್ರೇಲ್ ಆಕ್ರಮಣವೇ ಕಾರಣ: 4 ರಾಷ್ಟ್ರಗಳ ಜಂಟಿ ಹೇಳಿಕೆವಿದ್ಯಾರ್ಥಿಗಳ ಹೋರಾಟಕ್ಕೆ ನಾಸಿರುದ್ದೀನ್ ಶಾ, ಪಾಯಲ್ ಕಪಾಡಿಯಾ ಬೆಂಬಲಕಾನೂನಿನ ಭಯವೇ ಇಲ್ಲವೇ?: ಉದ್ರಿ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್ ಮಾಲಕನ ಹತ್ಯೆಗೋಲ್ಡನ್ ಚಾರಿಯಟ್ ರೈಲಿಗೆ ಮರುಚಾಲನೆ: ಟಿಕೆಟ್ ದರ 3.5 ಲಕ್ಷದಿಂದ 4.4 ಲಕ್ಷ ರೂ.ಪೆಲೆಟ್ ಗನ್ ಬಳಕೆ, ಮಹಿಳೆಯರಿಗೆ ಕಿರುಕುಳ : ಸುಪ್ರೀಂ ಕೋರ್ಟ ಸಮಿತಿಯಿಂದ ವಿಚಾರಣೆಸಿದ್ದರಾಮಯ್ಯ ಕುಟುಕು ಕಾರ್ಯಾಚರಣೆ : ದೆಹಲಿಯ ರಿತೇಶ ಪಾಂಡೆ ಬಂಧನಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಮುಖಕ್ಕೆ ಗಂಭೀರ ಗಾಯಚಿರತೆ ಸೆರೆ ವೇಳೆ ಅರಣ್ಯ ಇಲಾಖೆ ವೈದ್ಯರ ಮೇಲೆ ಹಲ್ಲೆ: 15 ಮಂದಿ ವಿರುದ್ಧ ಪ್ರಕರಣಸರ್ಕಾರವನ್ನು ಪ್ರಶ್ನಿಸಿದರೆ ಶಾಂತಿ ಭಂಗವೇ?: ಬಾಂಡ್‌ಗೆ ಸಹಿ ಹಾಕಲು ನೇಹಾ ಬೋರಾ ನಿರಾಕರಣೆ