ಹೊಸದಿಲ್ಲಿ, ಅ. 23: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ದಿಲ್ಲಿಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಶುಕ್ರವಾರ ಭಾರತೀಯ ಚುನಾವಣಾ ಆಯೋಗದ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
‘ಎಸ್ಐಆರ್ ವಿರುದ್ಧ ಜನತೆ’ ಸಂಘಟನೆಯ ನೇತೃತ್ವದಲ್ಲಿ ಮಧ್ಯ ದಿಲ್ಲಿಯ ಗೋಲ್ ಡಾಕ್ ಖಾನಾದಿಂದ ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಲಾಯಿತು. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯ ಎದುರಾಗಿದೆ ಎಂದು ಸಂಘಟಕರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಹಿರಿಯ ನಾಯಕಿ ಬೃಂದಾ ಕಾರಟ್, ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ರಾಜೀನಾಮೆ ನೀಡಬೇಕು, ಎಸ್ಐಆರ್ ಪ್ರಕ್ರಿಯೆ ನಿಲ್ಲಿಸಬೇಕು ಹಾಗೂ ಮತದಾನದ ಹಕ್ಕು ರಕ್ಷಿಸಬೇಕು ಎಂದು ಘೋಷಣೆ ಕೂಗಿದರು.
ರಾಷ್ಟ್ರಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು, ಮತದಾರರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು. ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಯುವಜನರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರು ಹೋರಾಟದಲ್ಲಿ ಭಾಗವಹಿಸುವಂತೆ ಸಂಘಟಕರು ಕರೆ ನೀಡಿದ್ದರು.
ಮೆರವಣಿಗೆಯ ಹಿನ್ನೆಲೆಯಲ್ಲಿ ಬಾಂಗ್ಲಾ ಸಾಹಿಬ್ ಗುರುದ್ವಾರ ಹಾಗೂ ಚುನಾವಣಾ ಆಯೋಗದ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದಿಲ್ಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಪೊಲೀಸರು ಮೆರವಣಿಗೆ ತಡೆದ ಸ್ಥಳದಲ್ಲಿಯೇ ‘ಜನತಾ ಸಂಸತ್ತು’ ನಡೆಸಿ ನಿರ್ಣಯಗಳನ್ನು ಅಂಗೀಕರಿಸುವುದಾಗಿ ಸಂಘಟಕರು ಘೋಷಿಸಿದ್ದರು. ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಕೂಡ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಧ್ಯ ದಿಲ್ಲಿಯ ಪ್ರಮುಖ ರಸ್ತೆಗಳಲ್ಲಿ ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಕನ್ನಾಟ್ ಪ್ಲೇಸ್, ಜಂತರ್ ಮಂತರ್, ಪಾರ್ಲಿಮೆಂಟ್ ಸ್ಟ್ರೀಟ್ ಹಾಗೂ ಬಾಂಗ್ಲಾ ಸಾಹಿಬ್ ಗುರುದ್ವಾರ ಸುತ್ತಮುತ್ತ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯ ಕುರಿತು ಸಂಚಾರ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದರು.