ಮುಂಬೈ, ಸೆ 13 : (ಸಮದರ್ಶಿ ಸುದ್ದಿ) - ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿರುವ ಎಲ್ಲ 21 ರಾಜ್ಯಗಳಲ್ಲಿ 2029ರೊಳಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೆಲವು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಿದೆ. 2029ರೊಳಗೆ ಎನ್‌ಡಿಎ ಆಡಳಿತವಿರುವ ಎಲ್ಲ 21 ರಾಜ್ಯಗಳಲ್ಲೂ ಇದನ್ನು ಜಾರಿಗೆ ತರಲಾಗುವುದು ಎಂಬ ವಿಶ್ವಾಸವಿದೆ ಎಂದರು.
ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸುತ್ತಿದೆ. ಸರ್ಜಿಕಲ್ ಸ್ಟ್ರೈಕ್, ವಾಯುದಾಳಿ ಹಾಗೂ ಆಪರೇಷನ್ ಸಿಂಧೂರದಂತಹ ಕಾರ್ಯಾಚರಣೆಗಳ ಮೂಲಕ ಭಯೋತ್ಪಾದಕ ದಾಳಿಗಳಿಗೆ ಭಾರತ ತಕ್ಕ ಉತ್ತರ ನೀಡಿದೆ. ಸಂವಿಧಾನದ 370ನೇ ವಿಧಿ ರದ್ದು, ನಕ್ಸಲಿಸಂ ನಿಯಂತ್ರಣ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಸಮಸ್ಯೆಗಳ ಪರಿಹಾರದ ಮೂಲಕ ದೇಶದ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ ನಡೆಸಲಾಗುವುದು ಎಂದ ಅವರು, ಬಿಜೆಪಿ, ಮಿತ್ರಪಕ್ಷಗಳು, ಎನ್‌ಡಿಎ ಹಾಗೂ ವಿವಿಧ ಸ್ವಯಂಸೇವಾ ಸಂಘಟನೆಗಳು ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಸೇವೆಯನ್ನು ಗುರುತಿಸಿ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್ 17ರಂದು ಮೋದಿ ಅವರ ಜನ್ಮದಿನವಾಗಿದ್ದು, ಅಕ್ಟೋಬರ್ 7ರಂದು ಅವರು ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಸತತ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಶಾ ಹೇಳಿದರು.
ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲೆ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಹಾಗೂ ಬೂತ್ ಮಟ್ಟದವರೆಗೆ ಅಭಿಯಾನ ನಡೆಯಲಿದೆ. ಬಡವರ ಕಲ್ಯಾಣ, ಆರ್ಥಿಕ ಬಲವರ್ಧನೆ, ರಾಷ್ಟ್ರೀಯ ಭದ್ರತೆ ಹಾಗೂ ದೀರ್ಘಕಾಲದ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ ಎಂದು ಅಮಿತ ಶಾ ಹೇಳಿದರು.