ಹೊಸದಿಲ್ಲಿ, ಸೆ. 13 : (ಸಮದರ್ಶಿ ಸುದ್ದಿ) - ಜನರನ್ನು ಬೆದರಿಸುವ ಮೂಲಕ ಇರಾನ್ ಅನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ. ಯಾವುದೇ ಒತ್ತಡಕ್ಕೂ ಇರಾನ್ ಮಣಿಯುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಸೇನೆಯನ್ನು ನೇರವಾಗಿ ಎದುರಿಸುವ ಬದಲು ಅಮೆರಿಕ ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯದ ಮೂಲಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿರುವ ಅವರು, ನಾಗರಿಕ ಪ್ರದೇಶಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
‘ಅಮೆರಿಕನ್ನರು ನಿಜವಾದ ಯೋಧರಾಗಿದ್ದರೆ ನಮ್ಮ ಸೇನೆಯನ್ನು ಎದುರಿಸಲಿ. ಜನರಿಗೆ ನೀರು, ಆಹಾರ ಮತ್ತು ಔಷಧ ಸಿಗದಂತೆ ತಡೆಯುವುದು ಯಾವ ರೀತಿಯ ಯುದ್ಧ? ಜನರನ್ನು ಬೆದರಿಸಿ ನಮ್ಮನ್ನು ಶರಣಾಗುವಂತೆ ಮಾಡಲು ಸಾಧ್ಯವಿಲ್ಲ. ಇರಾನ್ ಶರಣಾಗುವುದಿಲ್ಲ’ ಎಂದು ಪೆಜೆಶ್ಕಿಯನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪೆಜೆಶ್ಕಿಯನ್, ಸಂದರ್ಶನವೊಂದರಲ್ಲಿ ಇರಾನ್ ಪರಮಾಣು ಕಾರ್ಯಕ್ರಮ, ಅಮೆರಿಕದೊಂದಿಗಿನ ಸಂಬಂಧ ಹಾಗೂ ಮಧ್ಯಪ್ರಾಚ್ಯದ ಭದ್ರತೆ ಕುರಿತು ಮಾತನಾಡಿದ್ದಾರೆ.
ಇರಾನ್ ಪರಮಾಣು ಶಸ್ತ್ರಾಸ್ತ್ರ ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ತಮ್ಮ ದೇಶದ ಪರಮಾಣು ಕಾರ್ಯಕ್ರಮದ ಕುರಿತ ಆರೋಪಗಳನ್ನು ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ಕ್ರಮಕ್ಕೆ ನೆಪವಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.
ಇರಾನ್ ಪರಮಾಣು ಪ್ರಸರಣ ತಡೆ ಒಪ್ಪಂದದ ಸದಸ್ಯ ರಾಷ್ಟ್ರವಾಗಿದ್ದು, ತನ್ನ ಪರಮಾಣು ಚಟುವಟಿಕೆಗಳು ಅಂತರರಾಷ್ಟ್ರೀಯ ನಿಯಮಗಳ ಚೌಕಟ್ಟಿನಲ್ಲಿಯೇ ನಡೆಯುತ್ತಿವೆ. ‘ನಮಗೆ ಪರಮಾಣು ಶಸ್ತ್ರಾಸ್ತ್ರ ಪಡೆಯುವ ಉದ್ದೇಶವಿದ್ದಿದ್ದರೆ ನಾವು ಈ ಒಪ್ಪಂದದ ಸದಸ್ಯರಾಗಿರುತ್ತಿರಲಿಲ್ಲ’ ಎಂದು ಅವರು ಹೇಳಿದರು.
ಇರಾನ್ ಪರಮಾಣು ಚಟುವಟಿಕೆಗಳು ಅಂತರರಾಷ್ಟ್ರೀಯ ಮೇಲ್ವಿಚಾರಣೆಗೆ ಒಳಪಟ್ಟಿದ್ದು, ಪರಮಾಣು ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಟೆಹ್ರಾನ್ ಸಿದ್ಧವಿದೆ. ಆದರೆ ಅಮೆರಿಕದೊಂದಿಗೆ ತಕ್ಷಣ ನೇರ ಮಾತುಕತೆ ನಡೆಸುವುದು ಕಷ್ಟ ಎಂದು ಪೆಜೆಶ್ಕಿಯನ್ ತಿಳಿಸಿದರು.
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಯ ಬಳಿಕ ಅಮೆರಿಕದ ಮೇಲಿನ ನಂಬಿಕೆ ಮತ್ತಷ್ಟು ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಕ್ಷಣ ನೇರ ಮಾತುಕತೆಗೆ ಮರಳಬೇಕೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು ಮತ್ತು ತಮ್ಮ ದೇಶದ ಮೇಲಿನ ದಾಳಿಗಳನ್ನು ಅಮೆರಿಕ ನಿಲ್ಲಿಸಬೇಕು ಎಂಬುದು ಟೆಹ್ರಾನ್‌ನ ಸ್ಪಷ್ಟ ನಿಲುವಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಇಸ್ರೇಲ್ ಪರಮಾಣು ಪ್ರಸರಣ ತಡೆ ಒಪ್ಪಂದದ ಸದಸ್ಯ ರಾಷ್ಟ್ರವಾಗಿಲ್ಲದಿದ್ದರೂ ಅದರ ಪರಮಾಣು ಸಾಮರ್ಥ್ಯದ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕೆ ಸಮರ್ಪಕ ಪರಿಶೀಲನೆ ನಡೆಯುತ್ತಿಲ್ಲ ಎಂದು ಪೆಜೆಶ್ಕಿಯನ್ ಪ್ರಶ್ನಿಸಿದರು. ಗಾಝಾ ಮತ್ತು ಲೆಬನಾನ್‌ನಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಉಂಟಾಗುತ್ತಿರುವ ಅಡ್ಡಿಯ ಬಗ್ಗೆಯೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಇರಾನ್, ಸೌದಿ ಅರೇಬಿಯಾ, ತುರ್ಕಿಯೆ, ಪಾಕಿಸ್ತಾನ ಸೇರಿದಂತೆ ಪ್ರಾದೇಶಿಕ ರಾಷ್ಟ್ರಗಳು ಸಾಮಾನ್ಯ ಭದ್ರತಾ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಕರೆ ನೀಡಿದ ಅವರು, ಸಂಘರ್ಷದ ಬದಲು ವ್ಯಾಪಾರ, ಆರ್ಥಿಕ ಸಹಕಾರ ಮತ್ತು ಪರಸ್ಪರ ಗೌರವದ ಮೂಲಕ ಪ್ರದೇಶದ ಭವಿಷ್ಯ ನಿರ್ಮಿಸಬಹುದು ಎಂದು ಪ್ರತಿಪಾದಿಸಿದರು.