ಲಖನೌ, ಸೆ. 13 : (ಸಮದರ್ಶಿ ಸುದ್ದಿ) - ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಸ್ವತಂತ್ರ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಗೂ ನಿಂದನೆಗಳು ಬರುತ್ತಿವೆ ಎಂದು ವರದಿಯಾಗಿದೆ.
ಸೆ. 12ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಯೋಗಿ ಆದಿತ್ಯನಾಥ ಅವರು ತಮ್ಮ ಮಾತು ಮುಗಿಸಿದ ಬಳಿಕ ಪತ್ರಕರ್ತರಿಂದ ಪ್ರಶ್ನೆಗಳನ್ನು ಸ್ವೀಕರಿಸದೆ ಹೊರಡಲು ಮುಂದಾಗಿದ್ದರು. ಈ ವೇಳೆ ಸಭಾಂಗಣದ ಹಿಂಭಾಗದಲ್ಲಿದ್ದ ದಿವ್ಯಾ, ‘ಮುಖ್ಯಮಂತ್ರಿಗಳೇ, ದಯವಿಟ್ಟು ಉತ್ತರಿಸಿ. ಇದು ಸುದ್ದಿಗೋಷ್ಠಿ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲವೇ? ನಮ್ಮನ್ನು ಇಲ್ಲಿಗೆ ಕರೆದಿರುವುದು ನಿಮ್ಮ ಮಾತನ್ನು ಮಾತ್ರ ಕೇಳಿಸುವುದಕ್ಕಾಗಿಯೇ?’ ಎಂದು ಪ್ರಶ್ನಿಸಿದ್ದರು.
ಆದರೆ ಯೋಗಿ ಮಂದಹಾಸ ಬೀರುತ್ತಾ ಯಾವುದೇ ಉತ್ತರ ನೀಡದೆ ಅಲ್ಲಿಂದ ತೆರಳಿದರು ಎನ್ನಲಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಸುದ್ದಿಗೋಷ್ಠಿಯಿಂದ ಹೊರಬರುತ್ತಿದ್ದಾಗ ಕೆಲವು ಬಿಜೆಪಿ ಬೆಂಬಲಿಗರು ತಾವು ಯಾವ ಸುದ್ದಿವಾಹಿನಿಯನ್ನು ಪ್ರತಿನಿಧಿಸುತ್ತೀರಿ ಎಂದು ಪ್ರಶ್ನಿಸಿ ತಮ್ಮೊಂದಿಗೆ ವಾಗ್ವಾದ ನಡೆಸಿದರು ಎಂದು ದಿವ್ಯಾ ತಿಳಿಸಿದ್ದಾರೆ. ಬಳಿಕ ತಮ್ಮನ್ನು ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್ ಕಳುಹಿಸಿದ ವ್ಯಕ್ತಿ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದಿದ್ದಾರೆ.
ತಾವು ಯಾವುದೇ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ, ಸ್ವತಂತ್ರ ಪತ್ರಕರ್ತೆಯಾಗಿ ತಮ್ಮ ಕರ್ತವ್ಯದ ಭಾಗವಾಗಿ ಮುಖ್ಯಮಂತ್ರಿಗೆ ಪ್ರಶ್ನೆ ಕೇಳಿದ್ದಾಗಿ ದಿವ್ಯಾ ಸ್ಪಷ್ಟಪಡಿಸಿದ್ದಾರೆ.
ಘಟನೆಯ ವೀಡಿಯೊ ವೈರಲ್ ಆದ ಬಳಿಕ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ರಾಜಕೀಯ ವಲಯಗಳಿಂದ ಯೋಗಿ ಆದಿತ್ಯನಾಥ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್, ‘ಉತ್ತರ ಪ್ರದೇಶದಲ್ಲಿ ಪ್ರಶ್ನೆಗಳು ಸಾಕಷ್ಟಿವೆ. ಆದರೆ ಬಿಜೆಪಿ ಸರ್ಕಾರದ ಬಳಿ ಉತ್ತರಗಳಿಲ್ಲ’ ಎಂದು ಟೀಕಿಸಿದ್ದಾರೆ. ಪತ್ರಕರ್ತರಿಗೆ ಪ್ರಶ್ನಿಸುವ ಅವಕಾಶವೇ ಇಲ್ಲದಿದ್ದರೆ ಅದನ್ನು ‘ಸುದ್ದಿಗೋಷ್ಠಿ’ ಎನ್ನುವುದಕ್ಕಿಂತ ‘ಏಕಪಾತ್ರಾಭಿನಯ’ ಎನ್ನುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ.
ಪತ್ರಕರ್ತೆಯೊಬ್ಬರು ಮುಖ್ಯಮಂತ್ರಿ ಎದುರು ನೇರವಾಗಿ ಪ್ರಶ್ನೆ ಕೇಳುತ್ತಿರುವ ವೀಡಿಯೊ ಮತ್ತು ಅದರ ನಂತರ ಎದುರಿಸಿದ ಬೆದರಿಕೆಗಳ ಆರೋಪ ಇದೀಗ ಮಾಧ್ಯಮ ಸ್ವಾತಂತ್ರ್ಯ ಹಾಗೂ ಸುದ್ದಿಗೋಷ್ಠಿಗಳಲ್ಲಿ ಪತ್ರಕರ್ತರಿಗೆ ಪ್ರಶ್ನಿಸುವ ಅವಕಾಶದ ಕುರಿತು ಚರ್ಚೆಗೆ ಕಾರಣವಾಗಿದೆ.