ಹುಬ್ಬಳ್ಳಿ, ಸೆ. 13 : (ಸಮದರ್ಶಿ ಸುದ್ದಿ) - ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದ ಘಟನೆ ನಗರದಲ್ಲಿ ನಡೆದಿದೆ.
ಸೆ. 12ರಂದು ರಾತ್ರಿ ಸುಮಾರು 9.30ರ ವೇಳೆಗೆ ಮರಾಠ ಗಲ್ಲಿಯಿಂದ ಸಿಬಿಟಿ ಕಡೆಗೆ ತೆರಳುವ ರಸ್ತೆಯಲ್ಲಿ ಮೇದಾರ್ ಓಣಿಯ ಗಣಪತಿ ಹಾಗೂ ಕಲಾಲ್ ಓಣಿಯ ಗಣಪತಿ ಮೆರವಣಿಗೆಗಳು ಮುಖಾಮುಖಿಯಾಗಿದ್ದವು.
ಈ ವೇಳೆ ಗಣಪತಿ ಮೆರವಣಿಗೆಯ ಧ್ವನಿವರ್ಧಕದ ಮುಂದೆ ಕೆಲ ಯುವಕರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದರು ಎನ್ನಲಾಗಿದೆ.
ಪರಿಸ್ಥಿತಿ ಕೈಮೀರುವುದನ್ನು ತಡೆಯಲು ಪೊಲೀಸರು 30 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯಲ್ಲಿ ಕನಿಷ್ಠ ಪ್ರಮಾಣದ ಬಲಪ್ರಯೋಗ ನಡೆಸಿ ಯುವಕರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ತಿಳಿದುಬಂದಿದೆ.