ಜೈಪುರ, ಅ. 19: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕೋಟಾದಲ್ಲಿ ಬಾಲಕ ಸೇರಿದಂತೆ ಮೂವರು ಶಂಕಿತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಪುಣೆ-ಜೈಪುರ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತರನ್ನು ಕೋಟಾ ಪೊಲೀಸರು ಕೇವಲ 15 ನಿಮಿಷಗಳ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿನಿ ಗೌತಮ್, ಬಂಧಿತರಲ್ಲಿ ಒಬ್ಬಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಹಚರ ಎನ್ನಲಾದ ಅನಿಲ್ ಪಂಡಿತ್ ಎಂಬಾತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.
ವಶಕ್ಕೆ ಪಡೆದವರನ್ನು ಬಿಹಾರದ ಬೇಗುಸರಾಯ್ ಮೂಲದ ರಿತಿಕ್ ಅಲಿಯಾಸ್ ರೋಷನ್ ಹಾಗೂ ಹರಿಯಾಣದ ಸೋನಿಪತ್ ಮೂಲದ ರೆಹಾನ್ ಎಂದು ಗುರುತಿಸಲಾಗಿದೆ. ಮೂರನೆಯವನು ಅಪ್ರಾಪ್ತ ಬಾಲಕನಾಗಿದ್ದಾನೆ. ಪ್ರಾಥಮಿಕ ವಿಚಾರಣೆಯಲ್ಲಿ ರೆಹಾನ್, ಅನಿಲ್ ಪಂಡಿತ್ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂಬೈ ಪೊಲೀಸರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಕೋಟಾ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು. ಸೋಮವಾರ ಬೆಳಿಗ್ಗೆ 10.17ಕ್ಕೆ ಪುಣೆ-ಜೈಪುರ ರೈಲು ಕೋಟಾ ನಿಲ್ದಾಣ ತಲುಪುತ್ತಿದ್ದಂತೆ ಶೋಧ ನಡೆಸಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಗ್ಯಾಂಗ್‌ಸ್ಟರ್ ನಿಗ್ರಹ ಕಾರ್ಯಪಡೆ (ಎಜಿಟಿಎಫ್) ಹಾಗೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸಹಕರಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಬಳಿಕ ರೈಲು ಹತ್ತಿದ್ದ ಆರೋಪಿಗಳು ಜೈಪುರದಿಂದ ಬಸ್ ಮೂಲಕ ದೆಹಲಿಗೆ ತೆರಳಿ, ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಯೋಜಿಸಿದ್ದರು. ಆದರೆ, ಶಂಕಿತರಿಂದ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ಎಸ್‌ಪಿ ಗೌತಮ್ ತಿಳಿಸಿದ್ದಾರೆ.
ಮುಂಬೈ ಪೊಲೀಸರ ತಂಡ ಕೋಟಾ ತಲುಪಿದ್ದು, ಶಂಕಿತರನ್ನು ಅವರಿಗೆ ಹಸ್ತಾಂತರಿಸಲಾಗುವುದು. ಮುಂಬೈ ಪೊಲೀಸರು ವಶಕ್ಕೆ ಪಡೆದ ಬಳಿಕ ಅಧಿಕೃತವಾಗಿ ಬಂಧಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಇತರ ಇಬ್ಬರು ಗಾಯಗೊಂಡಿದ್ದರು. ಗುಂಡಿನ ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.