ಗ್ಯಾಂಗಟಾಕ್, ಅ. 19: ಅಂಕಿತಾ ಭಂಡಾರಿ ಕೊಲೆ ಪ್ರಕರಣದ ‘ವಿಐಪಿ’ ವಿವಾದಕ್ಕೆ ಸಂಬಂಧಿಸಿದಂತೆ ನೇಮಕಕ್ಕೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ದುಷ್ಯಂತ್ ಕುಮಾರ್ ಗೌತಮ್ ಅವರು ಸೋಮವಾರ ಸಿಕ್ಕಿಂನ 19ನೇ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗ್ಯಾಂಗ್‌ಟಾಕ್‌ನ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಿಕ್ಕಿಂ ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ ಮುಸ್ತಾಕ ಅವರು ಗೌತಮ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ, ಸಚಿವ ಸಂಪುಟದ ಸದಸ್ಯರು, ವಿಧಾನಸಭೆ ಸ್ಪೀಕರ್, ಹೈಕೋರ್ಟ ನ್ಯಾಯಮೂರ್ತಿಗಳು, ಸಂಸದರು, ಶಾಸಕರು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಮಾಣ ವಚನದ ಬಳಿಕ ಸಿಕ್ಕಿಂ ಸಶಸ್ತ್ರ ಪೊಲೀಸರು ನೂತನ ರಾಜ್ಯಪಾಲರಿಗೆ ಸಾಂಪ್ರದಾಯಿಕ ಗೌರವ ವಂದನೆ ಸಲ್ಲಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ 12ರಂದು ದುಷ್ಯಂತ ಕುಮಾರ ಗೌತಮ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಿದ್ದರು. ಅವರು ಓಂ ಪ್ರಕಾಶ್ ಮಾಥುರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನೇಮಕಕ್ಕೆ ವಿರೋಧ: ಗೌತಮ್ ಅವರ ನೇಮಕ ವಿರೋಧಿಸಿ ಕಳೆದ ವಾರ ಗ್ಯಾಂಗ್‌ಟಾಕ್‌ನ ಜಿಲ್ಲಾ ಆಡಳಿತ ಕೇಂದ್ರದ ಬಳಿ ಪಕ್ಷಾತೀತ ಯುವಕರು ಹಾಗೂ ನಾಗರಿಕರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು.
2022ರ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಪಾತ್ರದ ಕುರಿತು ‘ವಿಐಪಿ’ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಗೌತಮ್ ಅವರ ನೇಮಕವನ್ನು ಮುಂದೂಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು.
ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳದಿರುವಾಗ ಗೌತಮ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೂ, ಅವರು ಸೋಮವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.