
ಘಟಪ್ರಭಾ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಘಟಪ್ರಭಾ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪಟ್ಟಣದ ಮೃತ್ಯುಂಜಯ ಸರ್ಕಲ್ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ರಸ್ತೆ ತಡೆ ನಡೆಸಿದ ರೈತರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಿ, ಬೆಳೆಗಾರರ ಹಿತ ಕಾಪಾಡುವಂತೆ ಒತ್ತಾಯಿಸಿದರು.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರೈತನಿಲ್ಲದೆ ಯಾರ ಬದುಕೂ ಸಾಗುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೂ ರೈತರ ಬದುಕಿನೊಂದಿಗೆ ಸರ್ಕಾರಗಳು ಚೆಲ್ಲಾಟವಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಪ್ರತಿದಿನ ವಸ್ತುಗಳ ಬೆಲೆ ಬದಲಾಗುತ್ತದೆ. ಆದರೆ ರೈತ ಬೆಳೆದ ಬೆಳೆಗೆ ವರ್ಷದಿಂದ ವರ್ಷಕ್ಕೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದರೆ ದೇಶದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ರೈತರು ಸಂತೋಷವಾಗಿದ್ದರೆ ಮಾತ್ರ ಇಡೀ ದೇಶ ಸಮೃದ್ಧವಾಗಿರಲು ಸಾಧ್ಯ. ಆದ್ದರಿಂದ ಸರ್ಕಾರ ರೈತರ ಬೇಡಿಕೆಗಳನ್ನು ತಕ್ಷಣ ಈಡೇರಿಸಿ, ಅವರ ಬದುಕಿಗೆ ನೆಮ್ಮದಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಮೃತ್ಯುಂಜಯ ದೇವರು, ರೈತ ಸಂಘದ ಜಿಲ್ಲಾಧ್ಯಕ್ಷ ಗೋಪಾಲ ಕೊಕನೂರ, ಮಾರುತಿ ಹುಕ್ಕೇರಿ, ರಮೇಶ ತುಕ್ಕನಟ್ಟಿ, ಕೆಂಪಣ್ಣ ಚೌಕಾಶಿ, ಗಂಗಾಧರ ಬಡಕುಂದ್ರಿ, ಸಂತೋಷ ಹುಕ್ಕೇರಿ, ಪುಂಡಲೀಕ ನಿಡಸೋಸಿ, ಮಾರುತಿ ನಾಯಕ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸಿದ್ರಾಮ ಪೂಜಾರಿ, ಮುತ್ತಣ್ಣ ಹತ್ತರಾವಾಟ, ಪುಟ್ಟು ಖಾನಾಪುರೆ, ಕೊಟ್ರೇಶ ಪಟ್ಟಣಶೆಟ್ಟಿ, ಅಪ್ಪಾಸಾಬ ಮುಲ್ಲಾ, ರೆಹಮಾನ ಮೊಕಾಶಿ, ಕೃಷ್ಣ ಗಂಡ್ವಗೋಳ ಸೇರಿದಂತೆ ಹಲವರು ಮಾತನಾಡಿದರು.
ಘಟಪ್ರಭಾ ಸುತ್ತಮುತ್ತಲಿನ ಶಿಂಧಿಕುರಬೇಟ, ಪಾಮಲದಿನ್ನಿ, ಬಡಗಿವಾಡ, ಕಲ್ಲೋಳ್ಳಿ, ಸಂಗನಕೇರಿ, ಅರಭಾವಿ, ಧುಪದಾಳ, ಕೊಣ್ಣೂರ, ಸಾವಳಗಿ, ಶಿರಢಾಣ, ಝುಂಗಟಿಹಾಳ ಹಾಗೂ ಗುಡಸ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ದಲಿತಪರ, ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಬಂದ್ ಹಿನ್ನೆಲೆಯಲ್ಲಿ ಘಟಪ್ರಭಾ ಪಟ್ಟಣದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ತರಕಾರಿ ಮಾರುಕಟ್ಟೆಯೂ ಮುಚ್ಚಿತ್ತು. ರಸ್ತೆ ತಡೆ ನಡೆಸಿದ ರೈತರು ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಸಾಮೂಹಿಕವಾಗಿ ಊಟ ಮಾಡುವ ಮೂಲಕ ಹೋರಾಟ ಮುಂದುವರಿಸಿದರು.